ನಾಯನೇಗಲಿಯಲ್ಲಿ ಪಿಕೆಪಿಎಸ್ ಬ್ಯಾಂಕ್ ನೂತನ ಕಚೇರಿ ಉದ್ಘಾಟನೆ

ಬಾಗಲಕೋಟೆ: ತಾಲ್ಲೂಕಿನ ನಾಯನೇಗಲಿ ಗ್ರಾಮದಲ್ಲಿ  ಪಿಕೆಪಿಎಸ್ ಬ್ಯಾಂಕ್‌ನ ನೂತನ ಕಚೇರಿಯನ್ನು ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಉಮೇಶ್ ಮೇಟಿ ಉದ್ಘಾಟಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಶಾಸಕ ಉಮೇಶ್ ಮೇಟಿ, ಗ್ರಾಮೀಣ ಪ್ರದೇಶದ ರೈತರ ಆರ್ಥಿಕ ಅಭಿವೃದ್ಧಿಯಲ್ಲಿ ಸಹಕಾರ ಸಂಘಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ . ಪಿಕೆಪಿಎಸ್ ಸಂಸ್ಥೆಯು ರೈತರಿಗೆ ಅಗತ್ಯವಾದ ಸಾಲ ಸೌಲಭ್ಯ, ಕೃಷಿ ಚಟುವಟಿಕೆಗಳಿಗೆ ಬೇಕಾದ ನೆರವು ಹಾಗೂ ವಿವಿಧ ಯೋಜನೆಗಳ ಪ್ರಯೋಜನಗಳನ್ನು ತಲುಪಿಸುವಲ್ಲಿ ಪ್ರಮುಖವಾಗಿ ಕಾರ್ಯನಿರ್ವಹಿಸಬೇಕು . ಸಂಘದ ಆಡಳಿತ ಮಂಡಳಿ ಮತ್ತು ಅಧ್ಯಕ್ಷರು ಪಾರದರ್ಶಕ ಆಡಳಿತದ ಮೂಲಕ ಸದಸ್ಯರ ವಿಶ್ವಾಸವನ್ನು ಗಳಿಸಿ, ಸಂಘವನ್ನು ಇನ್ನಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯಬೇಕು.
ರೈತರು ಸಂಘದ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ತಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಬೇಕು. ಸರ್ಕಾರದ ವಿವಿಧ ಯೋಜನೆಗಳು ಹಾಗೂ ಸೌಲಭ್ಯಗಳು ಪ್ರತಿಯೊಬ್ಬ ಅರ್ಹ ರೈತನಿಗೂ ತಲುಪುವಂತೆ ಸಂಘವು ಕಾರ್ಯನಿರ್ವಹಿಸಬೇಕು. ಹೊಸ ಕಚೇರಿಯ ನಿರ್ಮಾಣದಿಂದ ಸಂಘದ ಕಾರ್ಯಚಟುವಟಿಕೆಗಳಿಗೆ ಮತ್ತಷ್ಟು ವೇಗ ದೊರೆಯಲಿದ್ದು, ರೈತರಿಗೆ ಉತ್ತಮ ಸೇವೆ ನೀಡಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಬಳಿಕ ನಾಯನೇಗಲಿ ಪಿಕೆಪಿಎಸ್ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಸದಸ್ಯರು ಶಾಸಕ ಉಮೇಶ್ ಮೇಟಿ ಅವರನ್ನು ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಶ್ರೀ ಸಿದ್ದಲಿಂಗಯ್ಯ ಹಿರೇಮಠ ಗುರುಗಳು ವಹಿಸಿದ್ದರು. ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಸವಂತಪ್ಪ ಮೇಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿಕೆಪಿಎಸ್ ಅಧ್ಯಕ್ಷ ಸಂಗಪ್ಪ ಚಲವಾದಿ ವಹಿಸಿದ್ದರು. ಪಿಕೆಪಿಎಸ್ ಸಿಇಒ ಮನೋಹರ ಕೋಟಿ ವಂದನಾರ್ಪಣೆ ಸಲ್ಲಿಸಿದರೆ, ನಿರ್ದೇಶಕ ಆರ್.ಎಚ್. ಕುಲಕರ್ಣಿ ಸ್ವಾಗತಿಸಿದರು.

ಉಪಾಧ್ಯಕ್ಷ ದುಂಡಪ್ಪ ವಾಲೀಕಾರ, ಡಾ. ಅಂಗಡಿ, ಹಿರೇಬವಸಪ್ಪ ಗೌಡರ, ಪರಶು ಕಟಬರ್, ಶ್ರೀಕರ್ ದೇಸಾಯಿ ಮತ್ತು ಆಡಳಿತ ಮಂಡಳಿಯ ಸದಸ್ಯರು, ಸಿಬ್ಬಂದಿ ವರ್ಗ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರು ಉಪಸ್ಥಿತರಿದ್ದರು.

ವರದಿ :ಅಡಿವೆಪ್ಪ ಸರೂರ

ಕಾಮೆಂಟ್‌ಗಳು