ಬಾಗಲಕೋಟೆ ಉಪಚುನಾವಣೆ: ಸಿಎಂ ಸಿದ್ದರಾಮಯ್ಯ ಭೇಟಿ – ಮಲ್ಲಿಕಾರ್ಜುನ ಚರಂತಿಮಠ ಮನೆಗೆ ಆಗಮನ ರಾಜಕೀಯ ಚರ್ಚೆಗೆ ಕಾರಣ
ಬಾಗಲಕೋಟೆ: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್ 14ರಂದು ಬಾಗಲಕೋಟೆ ಜಿಲ್ಲೆಗೆ ಭೇಟಿ ನೀಡಲಿದ್ದು, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಈ ಭೇಟಿಯ ಹಿನ್ನೆಲೆಯಲ್ಲಿ ಜಿಲ್ಲೆಯ ರಾಜಕೀಯ ವಲಯದಲ್ಲಿ ಚಟುವಟಿಕೆಗಳು ಹೆಚ್ಚಾಗಿದ್ದು, ಬಾಗಲಕೋಟೆ ವಿಧಾನಸಭಾ ಉಪಚುನಾವಣೆಯ ಅಭ್ಯರ್ಥಿ ಘೋಷಣೆ ಕುರಿತ ಚರ್ಚೆಗಳು ತೀವ್ರಗೊಂಡಿವೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಬಾಗಲಕೋಟೆ ಕ್ಷೇತ್ರದಲ್ಲಿ ತೀವ್ರ ಸ್ಪರ್ಧೆ ನಡೆದಿತ್ತು. ಆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ದಿ ಎಚ್. ವೈ .ಮೇಟಿ ಅವರು 79,336 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ಬಿಜೆಪಿ ಅಭ್ಯರ್ಥಿಯಾದ ವೀರಣ್ಣ ಚರಂತಿಮಠ ಅವರು 73,458 ಮತಗಳನ್ನು ಪಡೆದಿದ್ದು, 5,878 ಮತಗಳ ಅಂತರದಲ್ಲಿ ಸೋಲು ಅನುಭವಿಸಿದ್ದರು.
ಅದೇ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಲ್ಲಿಕಾರ್ಜುನ ಚರಂತಿಮಠ ಅವರು 10,116 ಮತಗಳನ್ನು ಪಡೆದಿದ್ದರು. ಈ ಮತಗಳ ವಿಭಜನೆಯೇ ಬಿಜೆಪಿ ಅಭ್ಯರ್ಥಿಯ ಸೋಲಿಗೆ ಪ್ರಮುಖ ಕಾರಣವೆಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿತ್ತು. ಒಂದು ವೇಳೆ ಮಲ್ಲಿಕಾರ್ಜುನ ಚರಂತಿಮಠ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸದೇ ಇದ್ದರೆ, ವೀರಣ್ಣ ಚರಂತಿಮಠ ಅವರಿಗೆ ಗೆಲುವು ಸಾಧ್ಯವಾಗುತ್ತಿತ್ತೆಂಬ ಮಾತುಗಳು ಕ್ಷೇತ್ರದ ರಾಜಕೀಯ ವಲಯದಲ್ಲಿ ಕೇಳಿಬಂದಿದ್ದವು.
ಈ ಹಿನ್ನೆಲೆ ಈಗ ಬಾಗಲಕೋಟೆ ಉಪಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಲ್ಲಿಕಾರ್ಜುನ ಚರಂತಿಮಠ ಅವರ ಮನೆಗೆ ಭೇಟಿ ನೀಡಲಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ಈ ಭೇಟಿ ರಾಜಕೀಯವಾಗಿ ಮಹತ್ವ ಪಡೆದುಕೊಂಡಿದ್ದು, ಉಪಚುನಾವಣೆಯ ಹಿನ್ನೆಲೆಯಲ್ಲಿ ಹಲವು ಊಹಾಪೋಹಗಳಿಗೆ ಕಾರಣವಾಗಿದೆ.
ಸಿಎಂ ಭೇಟಿ ಸಂದರ್ಭದಲ್ಲಿ ಹಲವು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮಗಳು ನಡೆಯಲಿವೆ. ಇದೇ ವೇಳೆ ಕಾಂಗ್ರೆಸ್ ಪಕ್ಷದ ಪರವಾಗಿ ಬಾಗಲಕೋಟೆ ಉಪಚುನಾವಣೆಗೆ ಅಭ್ಯರ್ಥಿ ಹೆಸರನ್ನು ಘೋಷಣೆ ಮಾಡುವ ಸಾಧ್ಯತೆ ಇದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ಇದರಿಂದ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ರಾಜಕೀಯ ವಲಯದ ಗಮನ ಈಗ ಸಿಎಂ ಭೇಟಿಯತ್ತ ಕೇಂದ್ರೀಕೃತವಾಗಿದೆ.
ಮಲ್ಲಿಕಾರ್ಜುನ ಚರಂತಿಮಠ ಅವರ ಮನೆಗೆ ಮುಖ್ಯಮಂತ್ರಿ ಭೇಟಿ ನೀಡಲಿರುವುದು ಕೇವಲ ಸೌಜನ್ಯ ಭೇಟಿ ಮಾತ್ರವೇ ಅಥವಾ ಉಪಚುನಾವಣೆಯ ರಾಜಕೀಯ ತಂತ್ರದ ಭಾಗವೇ ಎಂಬ ಚರ್ಚೆ ಕಾರ್ಯಕರ್ತರು ಹಾಗೂ ಸಾರ್ವಜನಿಕರ ನಡುವೆ ನಡೆಯುತ್ತಿದೆ. ಸಿಎಂ ಈ ಭೇಟಿಯ ಮೂಲಕ ಯಾವುದೇ ಪ್ರಮುಖ ರಾಜಕೀಯ ಸಂದೇಶ ನೀಡಲಿದ್ದಾರೆಯೇ ಎಂಬ ಕುತೂಹಲವೂ ಹೆಚ್ಚಾಗಿದೆ.
ಒಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಅವರ ಬಾಗಲಕೋಟೆ ಭೇಟಿ ಹಾಗೂ ಮಲ್ಲಿಕಾರ್ಜುನ ಚರಂತಿಮಠ ಮನೆಗೆ ತೆರಳುವ ಕಾರ್ಯಕ್ರಮವು ಉಪಚುನಾವಣೆಯ ರಾಜಕೀಯ ಚರ್ಚೆಗೆ ಹೊಸ ತಿರುವು ನೀಡಿದೆ. ಈ ಭೇಟಿಯ ನಂತರ ಕ್ಷೇತ್ರದ ರಾಜಕೀಯ ಸಮೀಕರಣಗಳಲ್ಲಿ ಯಾವುದೇ ಬದಲಾವಣೆ ಉಂಟಾಗಬಹುದೇ ಎಂಬುದನ್ನು ಕಾದು ನೋಡಬೇಕಾಗಿದೆ.
ವರದಿ :ಅಡಿವೆಪ್ಪ ಸರೂರ
#Bagalkote
#Siddaramaiah
#ByElection
#KarnatakaPolitics
#UdayaLokaNews
ನಿಮ್ಮ ಸ್ಥಳೀಯ ಸುದ್ದಿಗಾಗಿ ನಮ್ಮನ್ನು ಸಂಪರ್ಕಿಸಿ
📞 7022177118
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ