೧೦೭ ವರ್ಷಗಳ ಇತಿಹಾಸ ಹೊಂದಿರುವ ನ್ಯಾಷನಲ್‌ ಎಜುಕೇಷನ್‌ ಸೊಸೈಟಿಯಿಂದ ನೂತನ ಇಂಜಿನಿಯಿರಿಂಗ್‌ ಕಾಲೇಜು ಪ್ರಾರಂಭ





ಬೆಂಗಳೂರು ಜೂನ್‌ ೨೦: ರಾಜ್ಯದ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಕೊಡುಗೆಯನ್ನು ನೀಡಿರುವ ನ್ಯಾಷನಲ್‌ ಎಜುಕೇಷನ್‌ ಸೊಸೈಟಿಯಿಂದ ಜಯನಗರದಲ್ಲಿ ಡಾ. ಎಚ್‌.ಎನ್‌ ನ್ಯಾಷನಲ್‌ ಕಾಲೇಜ್‌ ಆಫ್‌ ಇಂಜಿನಿಯರಿಂಗ್‌ ಪ್ರಾರಂಭಿಸಲಾಗಿದೆ. ಪ್ರಸಕ್ತ ವರ್ಷದಿಂದ ಇಂಜಿನಿಯರಿಂಗ್‌, ಎಂಬಿಎ ಮತ್ತು ಎಂಸಿಎ ಗೆ ದಾಖಲಾತಿಯನ್ನು ಪ್ರಾರಂಭಿಸಲಾಗುವುದು ಎಂದು ನ್ಯಾಷನಲ್‌ ಎಜುಕೇಷನ್‌ ಸೊಸೈಟಿ ಕರ್ನಾಟಕದ ಅಧ್ಯಕ್ಷರಾದ ಡಾ. ಹೆಚ್‌ ಎನ್‌ ಸುಬ್ರಮಣ್ಯ ತಿಳಿಸಿದರು.
 

ಇಂದು ಜಯನಗರದಲ್ಲರುವ ಡಾ. ಎಚ್‌.ಎನ್‌ ನ್ಯಾಷನಲ್‌ ಕಾಲೇಜ್‌ ಆಫ್‌ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ. ಎಚ್‌ ನರಸಿಂಹಯ್ಯ ಅವರ ಆದರ್ಶಗಳ ಮೇಲೆ ನಡೆಯುತ್ತಿರುವ ಶೈಕ್ಷಣಿಕ ಸಂಸ್ಥೆಗಳ ಮೂಲಕ ಮುಂದಿನ ಪೀಳಿಗೆಗೆ ಅನುಕೂಲವಾಗುವ ಶಿಕ್ಷಣ ನೀಡುವ ನಿಟ್ಟಿನಲ್ಲಿ ಇಂಜಿನೀಯರಿಂಗ್‌ ಕಾಲೇಜನ್ನು ಪ್ರಾರಂಭಿಸಿದ್ದೇವೆ ಎಂದರು.

 

1917ರಲ್ಲಿ ಪ್ರಾರಂಭವಾದ ಶಿಕ್ಷಣ ಸಂಸ್ಥೆಯೊಂದು ಹಲವು ಮಜಲುಗಳನ್ನು ದಾಟಿ ನ್ಯಾಷನಲ್ ಎಜುಕೇಷನ್ ಸೊಸೈಟಿ ಆಫ್ ಕರ್ನಾಟಕ ಎಂದು ನೋಂದಾಯಿತವಾಗಿದೆ. ಕೇವಲ ಪ್ರಾಢಶಾಲೆಯಿಂದ ಪ್ರಾರಂಭವಾದ ಸಂಸ್ಥೆ ಕಾಲಘಟದಲ್ಲಿ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಮತ್ತು ಪದವಿ ಶಿಕ್ಷಣವನ್ನು ನೀಡುವ ಒಟ್ಟು 21 ಶಾಲಾ ಕಾಲೇಜುಗಳನ್ನು ಸ್ಥಾಪಿಸಿತು. ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಶಾಲಾ-ಕಾಲೇಜುಗಳು ಮೂಲ ಸಂಸ್ಥೆಗಳಾದರೂ, ಅನೇಕ ಶಾಲಾ ಕಾಲೇಜುಗಳು ಗ್ರಾಮಾಂತರ ಪ್ರದೇಶದಲ್ಲಿ ಸ್ಥಾಪಿತವಾಗಿ ಸಮಾಜದ ಬಡ - ಕೆಳವರ್ಗದ ಜನರಿಗೆ ಶಿಕ್ಷಣವನ್ನು ನೀಡುತ್ತಿರುವುದು ಈ ಸಂಸ್ಥೆಯ ಹೆಗ್ಗಳಿಕೆಯಾಗಿದೆ ಎಂದರು.

 

ನ್ಯಾಷನಲ್‌ ಎಜುಕೇಷನ್‌ ಸೊಸೈಟಿ ಕರ್ನಾಟಕದ ಗೌರವ ಕಾರ್ಯದರ್ಶಿಗಳಾದ ವೆಂಕಟಶಿವಾರೆಡ್ಡಿ ಮಾತನಾಡಿ, ನ್ಯಾಷನಲ್ ಶಾಲಾ-ಕಾಲೇಜುಗಳು ಹಲವಾರು ಮುಖ್ಯೋಪಾಧ್ಯಾಯರು ಮತ್ತು ಪ್ರಾಂಶುಪಾಲರುಗಳನ್ನು ಕಂಡರೂ, ಡಾ. ಎಚ್.ಎನ್. ಅರ್ಥಾತ್ ಡಾ. ಎಚ್. ನರಸಿಂಹಯ್ಯವನರು ಈ ಕಾಲೇಜಿನ - ಸಂಸ್ಥೆಯ ಅಧ್ಯಾಪಕ - ಪ್ರಾಂಶುಪಾಲ - ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು ಸಂಸ್ಥೆಯ ಸುವರ್ಣಯುಗ ಎಂದೇ ಹೇಳಬಹುದು. ನ್ಯಾಷನಲ್ ಎಜುಕೇಷನ್ ಸೊಸೈಟಿ ಕಳೆದ 107 ವರ್ಷಗಳಿಂದ ಸಾಂಪ್ರದಾಯಿಕವಾದ ಶಿಕ್ಷಣವನ್ನು ನೀಡುತ್ತಾ ಸಧೃಡ ಸಮಾಜವನ್ನು ಕಟ್ಟುವಲ್ಲಿ ತನ್ನೆಲ್ಲ ಶಕ್ತಿಯನ್ನು ವ್ಯಯಿಸಿದೆಯಾದರೂ, ಬದಲಾದ ಕಾಲಘಟ್ಟ ಮತ್ತು ಸನ್ನಿವೇಶಗಳು ಇಂಜಿನಿಯರಿಂಗ್ ಕಾಲೇಜಿನ ಅಗತ್ಯವನ್ನು ಸಂಸ್ಥೆಗೆ ಮನವರಿಕೆ ಮಾಡಿಕೊಟ್ಟಿದೆ ಎಂದರು.

 
ದ ನ್ಯಾಷನಲ್‌ ಕಾಲೇಜು ಜಯನಗರದ ಅಧ್ಯಕ್ಷರಾದ ಡಾ ಪಿ.ಎಲ್‌ ವೆಂಕಟರಾಮ ರೆಡ್ಡಿ ಮಾತನಾಡಿ, ಐದನೇ ಕೈಗಾರಿಕಾ ಕ್ರಾಂತಿಯ ಅಂತರ್ಗತ ಅಂಶಗಳೇ ಭೌತ-ಗಣಿತ ವಿಜ್ಞಾನದ ತಳಹದಿಯ ಜೊತೆಗೆ ಕಂಪ್ಯೂಟರ್ ಸೈನ್ಸ್, ಇನ್ಫಾರ್ಮೇಶನ್ ಸೈನ್ಸ್, ಡೇಟಾ ಸೈನ್ಸ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತಿತರ ವಿಷಯಗಳಾಗಿವೆ. ಈ ಹಿನ್ನೆಲೆಯಲ್ಲಿ ಆಧುನಿಕ ಜಗತ್ತಿನ ಮುಂಚೂಣಿ ತಂತ್ರಜ್ಞಾನದಲ್ಲಿ ಉನ್ನತ ಶಿಕ್ಷಣವನ್ನು ನೀಡುವ ಮೂಲಕ, ಅತ್ಯುತ್ತಮ ತಂತ್ರಜ್ಞರನ್ನು ಸಮಾಜಕ್ಕೆ ನೀಡುವ ಉದ್ದೇಶದೊಂದಿಗೆ ನಮ್ಮ ಸಂಸ್ಥೆಯು 2024ನೇ ವರ್ಷದಿಂದ ಇಂಜಿನಿಯರಿಂಗ್ ಕಾಲೇಜನ್ನು ಸ್ಥಾಪಿಸುವ ಉದ್ದೇಶವನ್ನು ಹೊಂದಿತು. ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು, ಅಧ್ಯಾಪಕರು, ಹಿತೈಷಿಗಳ ಬೆಂಬಲದೊಂದಿಗೆ ಅತ್ಯಲ್ಪ ಅವಧಿಯಲ್ಲಿ AICTE ಯಿಂದ ಅನುಮತಿ ಪಡೆಯುವಲ್ಲಿ ಯಶಸ್ವಿಯಾಗಿದ್ದು, ವಿಟಿಯು ಹಾಗೂ ಕರ್ನಾಟಕ ಸರಕಾರದಿಂದ ಅಗತ್ಯ ಅನುಮತಿಯನ್ನು ಪಡೆದುಕೊಂಡಿದೆ ಎಂದರು.

 

ಪ್ರಸಕ್ತ ಶೈಕ್ಷಣೀಕ ವರ್ಷದಿಂದ ಕಂಪ್ಯೂಟರ್‌ ಸೈನ್ಸ್‌ನ ೧೨೬, ಇನ್ಪರ್‌ಮೇಶನ್‌ ಸೈನ್ಸ್‌ನ ೧೨೦, ಆರ್ಟಿಫೀಶಿಯಲ್‌ ಇಂಟಲಿಜೆನ್ಸ್‌ನ ೬೦, ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯೂನಿಕೇಷನ್‌ನ ೬೦, ಎಂಬಿಎ ನ ೧೨೦ ಮತ್ತು ಎಂಸಿಎ ಯ ೧೨೦ ಸೀಟುಗಳನ್ನು ತುಂಬಲಾಗುವುದು. ಉತ್ತಮ ಶೈಕ್ಷಣಿಕ ಹಿನ್ನಲೆ ಹೊಂದಿರುವ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ರಿಯಾಯತಿಯನ್ನು ನೀಡಲಾಗುವುದು ಎಂದರು.

 

ಪತ್ರಿಕಾಗೋಷ್ಠಿಯಲ್ಲಿ ನ್ಯಾಷನಲ್‌ ಎಜುಕೇಶನ್‌ ಸೊಸೈಟಿಯ ಖಚಾಂಚಿಗಳಾದ‌ ತಲ್ಲಂ ದ್ವಾರಾಕಾನಾಥ್, ಬಸವನಗುಡಿ ನ್ಯಾಷನಲ್‌ ಡಿಗ್ರಿ ಕಾಲೇಜಿನ ಅಧ್ಯಕ್ಷರಾದ ಸುಧಾಕರ್‌, ನ್ಯಾಷನಲ್‌ ಇಂಗ್ಲೀಷ್‌ ಶಾಲೆಯ ಚೇರ್‌ಪರ್ಸನ್‌ ಭಾವನಾ, ಬಸವನಗುಡಿ ನ್ಯಾಷನಲ್‌ ಪಿಯು ಕಾಲೇಜಿನ ಅಧ್ಯಕ್ಷರಾದ ರಾಮ್‌ ಮೋಹನ್‌ ಮತ್ತು ಇಂಜಿನೀಯರಿಂಗ್‌ ಕಾಲೇಜಿನ ಕೊ ಆರ್ಡಿನೇಟರ್‌ ಅಲಕಾನಂದ ಉಪಸ್ಥಿತರಿದ್ದರು. 


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬಾಗಲಕೋಟೆ ಕುರುಬರ ಸಂಘದ ಜಿಲ್ಲಾ ಅಧ್ಯಕ್ಷ ಸ್ಥಾನದಿಂದ ಡಿ.ಬಿ. ಸಿದ್ದಾಪುರರನ್ನು ವಿಮುಕ್ತಿಗೊಳಿಸಿ ಆದೇಶ

ಬಾಗಲಕೋಟೆಯಲ್ಲಿ ವಿಜಯೇಂದ್ರ ಸಮ್ಮುಖದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬಿಜೆಪಿ ಸೇರ್ಪಡೆ

ಬಾಗಲಕೋಟೆ ಉಪಚುನಾವಣೆ: ಸಿಎಂ ಸಿದ್ದರಾಮಯ್ಯ ಭೇಟಿ – ಮಲ್ಲಿಕಾರ್ಜುನ ಚರಂತಿಮಠ ಮನೆಗೆ ಆಗಮನ ರಾಜಕೀಯ ಚರ್ಚೆಗೆ ಕಾರಣ