ಸುತಗುಂಡರದಲ್ಲಿ ದ್ಯಾಮವ್ವ ದೇವಿ ಜಾತ್ರೆ: ಸಂಪ್ರದಾಯ–ಭಕ್ತಿಯ ಅದ್ಧೂರಿ ಆಚರಣೆ
ಬಾಗಲಕೋಟೆ:ಆಲಮಟ್ಟಿ ಸಮೀಪದ ಬಾಗಲಕೋಟೆ ತಾಲೂಕಿನ ಸುತಗುಂಡಾರ ಗ್ರಾಮ ಇಂದು ಭಕ್ತಿಯ ಸಂಭ್ರಮದಲ್ಲಿ ಮಿಂಚುತ್ತಿದೆ. ಕೃಷ್ಣ ನದಿಯ ತೀರದ ಸಮೀಪವಿರುವ ಈ ಹಳ್ಳಿ ಪ್ರಕೃತಿಯ ಸಾಂದ್ರತೆಯ ನಡುವೆ ಸಂಪ್ರದಾಯಗಳ ಸವಿಯನ್ನು ನೀಡುತ್ತದೆ.
ಇಂದಿನ ದಿನ ಗ್ರಾಮ ದೇವತೆ ದ್ಯಾಮವ್ವ ದೇವಿ ಜಾತ್ರೆ ನಡೆಯುತ್ತಿದ್ದು, ಗ್ರಾಮದ ಜನರು ಭಕ್ತಿ ಭಾವದಿಂದ ಭಾಗವಹಿಸಿದ್ದಾರೆ. ಗ್ರಾಮದೆಲ್ಲೆಡೆ ಭಜನೆ, ಕೀರ್ತನೆಗಳು ನಡೆಯುತ್ತಿದ್ದು, ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ. ಮನೆಮನೆಗಳಲ್ಲಿ ರಂಗೋಲಿ, ದೇವಸ್ಥಾನಗಳಲ್ಲಿ ವಿಶಿಷ್ಟ ಅಲಂಕಾರ ಹಾಗೂ ನಾದಸ್ವರ ಧ್ವನಿಗಳು ಹಬ್ಬದ ಸಂಭ್ರಮ ಹೆಚ್ಚಿಸಿವೆ.
ದ್ಯಾಮವ್ವ ತಾಯಿ ಈ ಗ್ರಾಮದ ರಕ್ಷಕ ದೇವತೆ ಎಂಬ ನಂಬಿಕೆ ಜನಗಳಲ್ಲಿ ಗಾಢವಾಗಿದೆ. ಕುಟುಂಬದಲ್ಲಿ ವೈಯಕ್ತಿಕ ಕಷ್ಟಗಳು ಎದುರಾದಾಗ ಗ್ರಾಮಸ್ಥರು ದ್ಯಾಮವ್ವ ತಾಯಿ ದೇವಸ್ಥಾನಕ್ಕೆ ಹೋಗಿ ತಮ್ಮ ಕಷ್ಟಗಳನ್ನು ಬೇಡಿಕೊಳ್ಳುತ್ತಾರೆ. ತಾಯಿಯ ಮುಂದೆ ಮನಸ್ಸು ತೆರೆಯುತ್ತ ಪ್ರಾರ್ಥಿಸಿದರೆ ಎಲ್ಲಾ ಸಂಕಷ್ಟಗಳು ಪರಿಹಾರವಾಗುತ್ತವೆ ಎಂಬ ಭರವಸೆ ಗ್ರಾಮಸ್ಥರಲ್ಲಿದೆ.
ಗ್ರಾಮದ ಹಿರಿಯರು, ಯುವಕರು ಒಂದಾಗಿ ಸೇರಿ ಜಾತ್ರೆಯನ್ನು ಯಶಸ್ವಿಗೊಳಿಸಿದ್ದಾರೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ಆಶೀರ್ವಾದ ಪಡೆದುಕೊಂಡಿದ್ದಾರೆ. ಆಚರಣೆಗಳಲ್ಲಿ ಶಿಸ್ತೂ, ಭಕ್ತಿಭಾವವೂ ಮಿಳಿತಗೊಂಡಿದ್ದು, ಪ್ರತಿಯೊಬ್ಬರಲ್ಲೂ ಉತ್ಸಾಹ ತುಂಬಿದೆ.
ಜಾತ್ರೆಗೆ ಒಂದು ವಾರ ಮುಂಚೆ ಗ್ರಾಮೀಣದಲ್ಲಿರುವ ಪ್ರತಿಯೊಂದು ದೇವಸ್ಥಾನಕ್ಕೆ ಸುಣ್ಣ ಅಚ್ಚಲಾಗುತ್ತದೆ. ಇಡೀ ಊರನ್ನು ಗ್ರಾಮ ಪಂಚಾಯಿತಿಯಿಂದ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲಾಗುತ್ತದೆ. ಗ್ರಾಮವೇ ಒಂದು ಹಬ್ಬದ ವೇದಿಕೆಯಾಗಿ ರೂಪಾಂತರಗೊಳ್ಳುತ್ತದೆ.
ಜಾತ್ರೆಯ ಅಂಗವಾಗಿ, ತಾಯಿಯನ್ನು ನದಿಯಲ್ಲಿ ಸ್ನಾನ ಮಾಡಿಸಿ, ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಕರೆತರಲಾಗುತ್ತದೆ. ತಾಯಿಯನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸುವ ತನಕ ವಿಶೇಷ ಆಚರಣೆಗಳು ನಡೆಯುತ್ತವೆ. ಈ ಅವಧಿಯಲ್ಲಿ ಗ್ರಾಮೀಣ ಸಂಪ್ರದಾಯದಂತೆ ಯಾರೂ ತಮ್ಮ ಮನೆಯಲ್ಲಿ ರೊಟ್ಟಿ ಬಡಿಯದೆ, ಭಕ್ತಿಯಿಂದ ನಿಯಮ ಪಾಲಿಸುತ್ತಾರೆ ಎಂಬುದು ವಿಶೇಷ.
ಈ ಜಾತ್ರೆಯ ಇನ್ನೊಂದು ವೈಶಿಷ್ಟ್ಯವೆಂದರೆ, ಗ್ರಾಮಸ್ಥರು ಎಲ್ಲೆಡೆ ವಾಸವಾಗಿದ್ದರೂ—ಯಾವ ರಾಜ್ಯದಲ್ಲಿರಲಿ, ಯಾವ ಜಿಲ್ಲೆಯಲ್ಲಿರಲಿ—ಜಾತ್ರೆಯ ದಿನ ಎಲ್ಲರೂ ಊರಿಗೆ ಆಗಮಿಸಿ ದೇವಿಯ ಸೇವೆಯಲ್ಲಿ ಭಾಗಿಯಾಗುವುದು. ಇದು ಗ್ರಾಮೀಣ ಏಕತೆಯ ಸ್ಪಷ್ಟ ನಿದರ್ಶನವಾಗಿದೆ.
ಜಾತ್ರೆಯ ಅಂಗವಾಗಿ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೂ ಆಯೋಜಿಸಲಾಗುತ್ತಿವೆ. ಇಂದು ಕ್ರಿಕೆಟ್ ಪಂದ್ಯಾವಳಿ ನಡೆದಿದ್ದು, ನಾಳೆ ಬುಧವಾರ ಕುಸ್ತಿ ಪಂದ್ಯಾವಳಿ ಹಾಗೂ ನಾಟಕ ಪ್ರದರ್ಶನಗಳು ನಡೆಯಲಿವೆ. ಯುವಕರಲ್ಲಿ ಕ್ರೀಡಾ ಉತ್ಸಾಹ ಮೂಡಿಸುವುದರ ಜೊತೆಗೆ, ಸಾಂಸ್ಕೃತಿಕ ಮೌಲ್ಯಗಳನ್ನು ಉಳಿಸುವಲ್ಲಿ ಈ ಕಾರ್ಯಕ್ರಮಗಳು ಪ್ರಮುಖ ಪಾತ್ರವಹಿಸುತ್ತಿವೆ.
ಗ್ರಾಮಸ್ಥರು ಡೊಳ್ಳು ಡೊಳ್ಳು ಬಾರಿಸುತ್ತಾ ಕುಣಿಯುತ್ತ ದೇವಿಯ ಮುಂದೆ ಭಕ್ತಿ ಭಾವದಿಂದ ಸ್ತುತಿ ಹಾಡಿ ಸಮರ್ಪಣೆಯಿಂದ ಪ್ರಾರ್ಥಿಸುತ್ತಾರೆ. ಈ ಜಾತ್ರೆ ಕೇವಲ ಧಾರ್ಮಿಕ ಕಾರ್ಯಕ್ರಮವಲ್ಲ; ಅದು ಗ್ರಾಮ ಸಂಸ್ಕೃತಿ, ಪರಂಪರೆ ಮತ್ತು ಒಗ್ಗಟ್ಟಿನ ಪ್ರತೀಕವಾಗಿದೆ.
ಕೃಷ್ಣ ತೀರದಲ್ಲಿ ಪ್ರತಿಧ್ವನಿಸುವ ಈ ಭಕ್ತಿಯ ನಾದ, ಗ್ರಾಮಜನರ ಆತ್ಮೀಯತೆ ಹಾಗೂ ಅಚಲ ವಿಶ್ವಾಸದ ಪ್ರತಿಬಿಂಬವಾಗಿದೆ.
ವರದಿ :ಅಡಿವೆಪ್ಪ ಸರೂರ
ಸಂಪಾದಕರು ಉದಯ ಲೋಕ ಕನ್ನಡ ದಿನಪತ್ರಿಕೆ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ