ತಾಯಿಯ ಅಂತ್ಯಕ್ರಿಯೆಗೂ ಬರಲಿಲ್ಲ ಮಕ್ಕಳು..! ನೀವೇ ಸುಟ್ಟು ಹಾಕಿ” ಎಂದ ಮಕ್ಕಳು..!
ಬೆಳಗಾವಿ: ಹೆತ್ತ ತಾಯಿ ದೈವಕ್ಕೆ ಸಮಾನ ಎಂದು ಹೇಳುವ ಸಮಾಜದಲ್ಲೇ ಮನಸ್ಸು ನೊಂದಿಸುವ ಘಟನೆ ಒಂದು ಬೆಳಕಿಗೆ ಬಂದಿದೆ. ನಗರದ ಶಾಹೂನಗರ ಪ್ರದೇಶದಲ್ಲಿ ನಡೆದ ಈ ಪ್ರಕರಣ ಮಾನವೀಯತೆಯನ್ನೇ ಪ್ರಶ್ನಿಸುವಂತಾಗಿದೆ.
ತಮ್ಮನ್ನು ಒಂಬತ್ತು ತಿಂಗಳು ಹೊತ್ತು ಸಾಕಿ ಬೆಳೆಸಿದ ತಾಯಿ ಮೃತಪಟ್ಟಾಗ, ಗೌರವಪೂರ್ವಕವಾಗಿ ಅಂತ್ಯಕ್ರಿಯೆ ನೆರವೇರಿಸಬೇಕಿದ್ದ ಮಕ್ಕಳೇ ಕ್ರೂರವಾಗಿ ವರ್ತಿಸಿರುವ ಆರೋಪ ಕೇಳಿಬಂದಿದೆ. ತಾಯಿ ನಿಧನವಾದ ವಿಷಯ ತಿಳಿಸಿದರೂ ಮಕ್ಕಳು ಆಗಮಿಸಲು ನಿರಾಕರಿಸಿದ್ದು, “ನಮಗೆ ಸಮಯವಿಲ್ಲ, ನೀವೇ ಸುಟ್ಟು ಹಾಕಿ” ಎಂದು ಹೇಳಿದರೆಂದು ತಿಳಿದುಬಂದಿದೆ.
ಈ ಘಟನೆ ಸ್ಥಳೀಯರಲ್ಲಿ ಆಕ್ರೋಶ ಮೂಡಿಸಿದ್ದು, ಕುಟುಂಬ ಮೌಲ್ಯಗಳ ಕುಸಿತದ ಬಗ್ಗೆ ಚರ್ಚೆಗೆ ಕಾರಣವಾಗಿದೆ. ಹೆತ್ತವರ ಮೇಲಿನ ಗೌರವ ಮತ್ತು ಜವಾಬ್ದಾರಿ ಮರೆತು ಹೋಗುತ್ತಿರುವ ಕಾಲದಲ್ಲಿ ಇಂತಹ ಘಟನೆಗಳು ಸಮಾಜಕ್ಕೆ ಎಚ್ಚರಿಕೆಯ ಗಂಟೆಯಾಗಿವೆ.
ಮಕ್ಕಳು ಕೈಬಿಟ್ಟ ಈ ಸಂದರ್ಭದಲ್ಲಿ, ಸಮಾಜಸೇವಕ ಶಂಕರ್ ಪಾಟೀಲ್ ಹಾಗೂ ಅವರ ತಂಡ ಮಾನವೀಯತೆ ತೋರಿದರು. ಅವರು ಮುಂದೆ ಬಂದು ಆ ತಾಯಿಯ ಅಂತ್ಯಕ್ರಿಯೆಯನ್ನು ಸಕಲ ವಿಧಿವಿಧಾನಗಳೊಂದಿಗೆ ನೆರವೇರಿಸಿ ಮಾನವೀಯ ಮೌಲ್ಯಗಳನ್ನು ಉಳಿಸಿದರು.
ರಕ್ತ ಸಂಬಂಧಗಳು ದೂರವಾದಾಗ, ಯಾವುದೇ ಸಂಬಂಧವಿಲ್ಲದವರು ಮಗನ ಸ್ಥಾನದಲ್ಲಿ ನಿಂತು ಗೌರವ ಸಲ್ಲಿಸಿರುವುದು ಸಮಾಜದಲ್ಲಿ ಇನ್ನೂ ಮಾನವೀಯತೆ ಜೀವಂತವಿದೆ ಎಂಬುದಕ್ಕೆ ಉದಾಹರಣೆಯಾಗಿದೆ.
ಈ ಘಟನೆ “ತಾಯಿ ದೇವರು” ಎಂದು ಹೇಳುವ ನಾವೆಲ್ಲರೂ, ಬದುಕಿರುವಾಗಲೇ ಅವರಿಗೆ ಬೇಕಾದ ಗೌರವ ನೀಡುತ್ತಿದ್ದೇವೇ ಎಂಬ ಪ್ರಶ್ನೆಯನ್ನು ಮತ್ತೆ ಎಬ್ಬಿಸಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ