ಮಾಹಿತಿ ಹಕ್ಕು ಕಾಯ್ದೆ: ಜನಪರ, ಪ್ರಜಾಪ್ರಭುತ್ವದ ಭದ್ರ ಬುನಾದಿ – ಆಯುಕ್ತ ಚನ್ನಾಳ
ಬೆಳಗಾವಿ, ಏ.27: ಮಾಹಿತಿ ಹಕ್ಕು ಕಾಯ್ದೆ ಜನಪರವಾಗಿದ್ದು, ಪ್ರಜಾಪ್ರಭುತ್ವದ ಭದ್ರ ಬುನಾದಿಯಾಗಿದೆ ಎಂದು ಕರ್ನಾಟಕ ಮಾಹಿತಿ ಆಯೋಗದ ಬೆಳಗಾವಿ ಪೀಠದ ರಾಜ್ಯ ಮಾಹಿತಿ ಆಯುಕ್ತ ಪ್ರಕಾಶ ನಾರಾಯಣ ಚನ್ನಾಳ ತಿಳಿಸಿದ್ದಾರೆ.
ಸ್ವತಂತ್ರ ಭಾರತದಲ್ಲಿ ಅತ್ಯಂತ ಕ್ರಾಂತಿಕಾರಕ ಕಾಯ್ದೆಯಾಗಿರುವ ಮಾಹಿತಿ ಹಕ್ಕು ಕಾಯ್ದೆ ಸಾಮಾನ್ಯ ಜನರಿಗೆ ಸರ್ಕಾರದ ಮಾಹಿತಿ ಸುಲಭವಾಗಿ ತಲುಪುವ ಉದ್ದೇಶದಿಂದ 2005ರ ಅಕ್ಟೋಬರ್ 12ರಂದು ಜಾರಿಗೆ ಬಂದಿದೆ ಎಂದು ಅವರು ಹೇಳಿದರು. ಈ ಕಾಯ್ದೆಯನ್ನು ಅನುಷ್ಠಾನಗೊಳಿಸಿದ ಪ್ರಥಮ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ ಎಂದರು.
ಕರ್ನಾಟಕ ಮಾಹಿತಿ ಆಯೋಗವು ಕಳೆದ ಒಂದು ವರ್ಷದಲ್ಲಿ ದೇಶದಲ್ಲೇ ದಾಖಲೆ ಪ್ರಮಾಣದಲ್ಲಿ 40 ಸಾವಿರಕ್ಕೂ ಹೆಚ್ಚು ದ್ವೀತಿಯ ಮೇಲ್ಮನವಿ ಪ್ರಕರಣಗಳನ್ನು ಇತ್ಯರ್ಥಗೊಳಿಸಿದೆ. ಬೆಳಗಾವಿ ಪೀಠದಲ್ಲಿ ಪ್ರತಿದಿನ 40ರಿಂದ 60 ಅರ್ಜಿಗಳ ವಿಚಾರಣೆ ಆನ್‌ಲೈನ್ ಹಾಗೂ ಆಫ್‌ಲೈನ್ ಮೂಲಕ ನಡೆಯುತ್ತಿದೆ.
ಗ್ರಾಮೀಣ ಭಾಗದ ಜನರ ಸಮಸ್ಯೆಗಳಾದ ಕುಡಿಯುವ ನೀರು, ರಸ್ತೆ, ವಿದ್ಯುತ್ ಸರಬರಾಜು, ಸ್ವಚ್ಛತೆ ಮತ್ತು ಆರೋಗ್ಯ ಸೇರಿದಂತೆ ಮೂಲ ಸೌಕರ್ಯಗಳ ಕುರಿತು ಬಂದ ಅರ್ಜಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಮಾಹಿತಿ ನೀಡಲು ವಿಫಲವಾಗುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಂಡು, ದಂಡ ವಿಧಿಸುವುದರ ಜೊತೆಗೆ ಅರ್ಜಿದಾರರಿಗೆ ಪರಿಹಾರ ನೀಡುವ ಆದೇಶಗಳನ್ನು ಹೊರಡಿಸಲಾಗುತ್ತಿದೆ ಎಂದು ಹೇಳಿದರು.
ಬೆಳಗಾವಿ ಪೀಠಕ್ಕೆ ಬರುತ್ತಿರುವ ಅರ್ಜಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವರ್ಷಕ್ಕೆ 6000ರಿಂದ 7000 ಅರ್ಜಿಗಳ ಇತ್ಯರ್ಥಕ್ಕೆ ಗುರಿ ನಿಗದಿಪಡಿಸಲಾಗಿದೆ. ಜಿಲ್ಲಾವಾರು ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ