ಕುಡಿಯುವ ನೀರಿಗಾಗಿ ಮೇ 18ರಿಂದ ಹರಿವು; ಕೃಷಿ ಬಳಕೆ ಸಂಪೂರ್ಣ ನಿಷೇಧ
ಘಟಪ್ರಭಾ ನದಿಗೆ 1.60 ಟಿಎಂಸಿ ನೀರು ಬಿಡುಗಡೆ
ಕುಡಿಯುವ ನೀರಿಗಾಗಿ ಮೇ 18ರಿಂದ ಹರಿವು; ಕೃಷಿ ಬಳಕೆ ಸಂಪೂರ್ಣ ನಿಷೇಧ
ಬಾಗಲಕೋಟೆ, ಮೇ 16: ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಯ ಘಟಪ್ರಭಾ ನದಿಯ ಅವಲಂಭಿತ ಗ್ರಾಮಗಳು ಮತ್ತು ಶ್ರೀ ರಾಮೇಶ್ವರ ಏತ ನೀರಾವರಿ ಯೋಜನೆ ವ್ಯಾಪ್ತಿಯ ಗ್ರಾಮಗಳ ಜನ–ಜಾನುವಾರುಗಳ ಕುಡಿಯುವ ನೀರಿನ ಅಗತ್ಯಕ್ಕಾಗಿ ಹಿಡಕಲ್ ಜಲಾಶಯದಿಂದ ಒಟ್ಟು 1.60 ಟಿಎಂಸಿ ನೀರನ್ನು ಮೇ 18ರಂದು ಬಿಡುಗಡೆ ಮಾಡಲು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತೆ ಜಾನಕಿ ಕೆ.ಎಂ ಆದೇಶ ಹೊರಡಿಸಿದ್ದಾರೆ.
ಬಿಡುಗಡೆಯಾಗುವ ನೀರನ್ನು ಕೇವಲ ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಕೃಷಿ ಸೇರಿದಂತೆ ಬೇರೆ ಯಾವುದೇ ಉದ್ದೇಶಕ್ಕೆ ನೀರನ್ನು ಬಳಸಬಾರದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಅನಧಿಕೃತ ಪಂಪ್‌ಸೆಟ್‌ಗಳ ಮೂಲಕ ನೀರು ಎತ್ತುವಿಕೆ ಕಂಡುಬಂದರೆ ಕರ್ನಾಟಕ ನೀರಾವರಿ ಕಾಯ್ದೆ–1965 ಅನ್ವಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
ನೀರಿನ ಸದ್ಬಳಕೆ ಹಾಗೂ ಉದ್ದೇಶಿತ ಸ್ಥಳಗಳಿಗೆ ನೀರು ತಲುಪುವಿಕೆ ಕುರಿತು ನಿಗಾವಹಿಸಲು ವಿವಿಧ ಇಲಾಖೆಗಳ ಅಧಿಕಾರಿಗಳ ತಂಡ ರಚನೆ ಮಾಡಲಾಗುವುದು. ಪ್ರತಿದಿನ ವರದಿ ಸಂಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಪ್ರಾದೇಶಿಕ ಆಯುಕ್ತರಿಗೆ ಸಲ್ಲಿಸಲು ಸೂಚಿಸಲಾಗಿದೆ.
ಹೆಸ್ಕಾಂ ಅಧಿಕಾರಿಗಳು ನೀರು ಬಿಡುವ ಅವಧಿಯಲ್ಲಿ ನದಿಗೆ ಹೊಂದಿಕೊಂಡಿರುವ ರೈತರ ಪಂಪ್‌ಸೆಟ್‌ಗಳ ವಿದ್ಯುತ್ ಸಂಪರ್ಕವನ್ನು ಕಡ್ಡಾಯವಾಗಿ ಕಡಿತಗೊಳಿಸಬೇಕು. ಜೊತೆಗೆ ಸೋಲಾರ್ ಮೋಟಾರ್ ಹಾಗೂ ಜನರೇಟರ್ ಸಂಪರ್ಕಗಳ ಮೇಲೂ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.
ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯವಿದ್ದಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ–2023ರ ಕಲಂ 163 ಜಾರಿಗೊಳಿಸಲು ಜಿಲ್ಲಾಡಳಿತಕ್ಕೆ ಅಧಿಕಾರ ನೀಡಲಾಗಿದೆ. 24x7 ಕಾರ್ಯಪಡೆ ರಚಿಸಿ ನೀರಿನ ಬಳಕೆ ಮೇಲೆ ನಿಗಾ ವಹಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ