ಮದುವೆ ಭಯಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ: ಓದಿನ ಕನಸು ಅರ್ಧದಲ್ಲೇ ಅಂತ್ಯ
ಆಂಧ್ರಪ್ರದೇಶದಲ್ಲಿ ಮನಕಲಕುವ ಘಟನೆ
ಮದುವೆ ಭಯಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ: ಓದಿನ ಕನಸು ಅರ್ಧದಲ್ಲೇ ಅಂತ್ಯ
ಆಂಧ್ರಪ್ರದೇಶದಲ್ಲಿ 17 ವರ್ಷದ ವಿದ್ಯಾರ್ಥಿನಿಯೊಬ್ಬಳು ಮದುವೆಯಾಗಬಹುದೆಂಬ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು ರೂಪಕೀರ್ತನ ಎಂದು ಗುರುತಿಸಲಾಗಿದೆ.
ರೂಪಕೀರ್ತನ ಇತ್ತೀಚೆಗಷ್ಟೇ ಪ್ರಥಮ ಪಿಯುಸಿ ಪರೀಕ್ಷೆ ಮುಗಿಸಿದ್ದಳು. ಶಿಕ್ಷಣದ ಮೇಲೆ ಅಪಾರ ಆಸೆ ಹೊಂದಿದ್ದ ಆಕೆ ಮುಂದುವರೆದು ಓದಲು ಬಯಸುತ್ತಿದ್ದಳು ಎನ್ನಲಾಗಿದೆ. ಇದೇ ವೇಳೆ ಮನೆಯಲ್ಲಿ “ಒಳ್ಳೆಯ ಸಂಬಂಧ ಬಂದರೆ ಮದುವೆ ಮಾಡೋಣ” ಎಂದು ಪೋಷಕರು ಮಾತುಕತೆ ನಡೆಸಿದ್ದರೆಂದು ತಿಳಿದುಬಂದಿದೆ.
ಪೋಷಕರ ಈ ಮಾತು ಕೇಳಿ ಆತಂಕಕ್ಕೊಳಗಾದ ವಿದ್ಯಾರ್ಥಿನಿ, “ನನಗೆ ಈಗ ಮದುವೆ ಬೇಡ, ನಾನು ಇನ್ನೂ ಓದಬೇಕು” ಎಂದು ತನ್ನ ಅಭಿಪ್ರಾಯವನ್ನು ತಿಳಿಸಿದ್ದಾಳೆ. ಆದರೆ ಮದುವೆಗಾಗಿ ಬಲವಂತ ಮಾಡಬಹುದು ಎಂಬ ಭಯದಿಂದ ಆಕೆ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಳು ಎನ್ನಲಾಗಿದೆ.
ಬುಧವಾರ ರೂಪಕೀರ್ತನ ವಿಷ ಸೇವಿಸಿದ್ದಾಳೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆಯಾದರೂ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾಳೆ.
ಈ ಘಟನೆ ಪೋಷಕರಲ್ಲಿ ಮಕ್ಕಳ ಮನಸ್ಥಿತಿಯನ್ನು ಸೂಕ್ಷ್ಮವಾಗಿ ಅರ್ಥಮಾಡಿಕೊಳ್ಳುವ ಅಗತ್ಯವನ್ನು ಮತ್ತೊಮ್ಮೆ ನೆನಪಿಸಿದೆ. ಮಕ್ಕಳ ಕನಸು, ಭಯ ಹಾಗೂ ಭಾವನೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕೆಂಬ ಚರ್ಚೆಗೆ ಈ ಘಟನೆ ಕಾರಣವಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ