ಜಕ್ಕಲಿ ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಆಂದೋಲನಕ್ಕೆ ಅದ್ಧೂರಿ ಚಾಲನೆ

ರೋಣ: ಸರ್ಕಾರಿ ಶಾಲೆಗಳು ಕೇವಲ ಅಕ್ಷರ ಕಲಿಸುವ ಕೇಂದ್ರಗಳಲ್ಲ, ಮಕ್ಕಳ ಭವಿಷ್ಯ ರೂಪಿಸುವ ಜ್ಞಾನ ದೇಗುಲಗಳಾಗಿವೆ ಎಂದು ಜಕ್ಕಲಿ ಗ್ರಾಮದ ಎಸ್‌ಡಿಎಂಸಿ ಅಧ್ಯಕ್ಷ ಅಂದಪ್ಪ ರಾಮಪ್ಪ ಮಾದರ ಹೇಳಿದರು.

ಗದಗ ಜಿಲ್ಲೆಯ ರೋಣ ತಾಲೂಕಿನ ಜಕ್ಕಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಸಂಕೀರ್ಣದಲ್ಲಿ (GMPS ಮತ್ತು HPKGS) 2026-27ನೇ ಸಾಲಿನ ದಾಖಲಾತಿ ಆಂದೋಲನ ಹಾಗೂ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಬುಧವಾರ ಅದ್ಧೂರಿಯಾಗಿ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಎಚ್‌ಪಿಕೆಜಿಎಸ್ ಶಾಲೆಯ ಮುಖ್ಯೋಪಾಧ್ಯಾಯ ಎಸ್.ಬಿ. ಗವಿ ಅವರು, “ಶಾಲೆಯಲ್ಲಿ ನುರಿತ ಶಿಕ್ಷಕರ ತಂಡವಿದ್ದು, ಗುಣಮಟ್ಟದ ಶಿಕ್ಷಣ ನೀಡಲು ಬದ್ಧರಾಗಿದ್ದೇವೆ. ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು ಸರ್ಕಾರಿ ಶಾಲೆಗಳಲ್ಲಿ ದೊರೆಯುವ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಶೂಗಳು ಹಾಗೂ ಪೌಷ್ಟಿಕ ಬಿಸಿಊಟದಂತಹ ಸೌಲಭ್ಯಗಳನ್ನು ಪೋಷಕರು ಸದುಪಯೋಗಪಡಿಸಿಕೊಳ್ಳಬೇಕು” ಎಂದು ಹೇಳಿದರು.

ಶಾಲೆಯ ಆವರಣದಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ, ಸುಂದರ ಪರಿಸರ ನಿರ್ಮಾಣ ಹಾಗೂ ಮಕ್ಕಳಿಗೆ ಅನುಕೂಲಕರ ವಾತಾವರಣ ಸೃಷ್ಟಿಸಿರುವುದಾಗಿ ತಿಳಿಸಿದರು.

ದಾಖಲಾತಿ ಆಂದೋಲನದ ವಿಶೇಷವೆಂದರೆ ಶಿಕ್ಷಕರು ಹಾಗೂ ಎಸ್‌ಡಿಎಂಸಿ ಸದಸ್ಯರು ತಮ್ಮ ಮಕ್ಕಳನ್ನೇ ಸರ್ಕಾರಿ ಶಾಲೆಗೆ ದಾಖಲಿಸುವ ಮೂಲಕ ಇತರ ಪೋಷಕರಿಗೆ ಮಾದರಿಯಾದರು. ಈ ವೇಳೆ ಹಲವು ಮಕ್ಕಳನ್ನು ಮೊದಲನೇ ತರಗತಿಗೆ ದಾಖಲಿಸಿಕೊಳ್ಳಲಾಯಿತು.

ಕಾರ್ಯಕ್ರಮದ ಬಳಿಕ ಎಸ್‌ಡಿಎಂಸಿ ಸದಸ್ಯರು ಹಾಗೂ ಶಿಕ್ಷಕರು ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಸರ್ಕಾರಿ ಶಾಲೆಗಳಲ್ಲಿನ ಗುಣಮಟ್ಟದ ಶಿಕ್ಷಣ, ಆಧುನಿಕ ಸೌಲಭ್ಯಗಳು ಮತ್ತು ವಿವಿಧ ಯೋಜನೆಗಳ ಕುರಿತು ಪೋಷಕರಿಗೆ ಮಾಹಿತಿ ನೀಡಿದರು.

ಶಾಲೆಯಲ್ಲಿ ಬಾಲ (BaLA) ಯೋಜನೆಯಡಿ ಗೋಡೆಗಳ ಮೇಲೆ ವರ್ಣಚಿತ್ರಗಳನ್ನು ಬಿಡಿಸಲಾಗಿದ್ದು, ಮಕ್ಕಳಿಗೆ ಆಟವಾಡುತ್ತಾ ಕಲಿಯುವ ವಾತಾವರಣ ಕಲ್ಪಿಸಲಾಗಿದೆ. ಬುದ್ಧ, ಬಸವಣ್ಣ, ಅಂಬೇಡ್ಕರ್ ಹಾಗೂ ಗಾಂಧೀಜಿಯವರ ಜಯಂತಿಗಳನ್ನು ಆಚರಿಸುವ ಮೂಲಕ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಲಾಗುತ್ತಿದೆ ಎಂದು ತಿಳಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರಾದ ಎಸ್.ಬಿ. ಗವಿ, ಹೆಚ್.ಎಸ್. ಬಿಂಗಿ, ಶಿಕ್ಷಕರಾದ ಎ.ಬಿ. ಜಕ್ಕಲಿ, ಎ.ಪಿ. ಶೆಟ್ಟರ್, ಎಂ.ವಿ. ತಾಳಿಕೋಟಿ, ಎಸ್.ಎ. ಪಲ್ಲೇದ, ಎಸ್.ಎಸ್. ಯಲ್ಲರೆಡ್ಡಿ, ಪಿ.ಜಿ. ಹುಯಿಲಗೋಳ ಹಾಗೂ ಎಸ್‌ಡಿಎಂಸಿ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬಾಗಲಕೋಟೆ ಕುರುಬರ ಸಂಘದ ಜಿಲ್ಲಾ ಅಧ್ಯಕ್ಷ ಸ್ಥಾನದಿಂದ ಡಿ.ಬಿ. ಸಿದ್ದಾಪುರರನ್ನು ವಿಮುಕ್ತಿಗೊಳಿಸಿ ಆದೇಶ

ಬಾಗಲಕೋಟೆಯಲ್ಲಿ ವಿಜಯೇಂದ್ರ ಸಮ್ಮುಖದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬಿಜೆಪಿ ಸೇರ್ಪಡೆ

ಬಾಗಲಕೋಟೆ ಉಪಚುನಾವಣೆ: ಸಿಎಂ ಸಿದ್ದರಾಮಯ್ಯ ಭೇಟಿ – ಮಲ್ಲಿಕಾರ್ಜುನ ಚರಂತಿಮಠ ಮನೆಗೆ ಆಗಮನ ರಾಜಕೀಯ ಚರ್ಚೆಗೆ ಕಾರಣ