ವಿಶ್ವ ಜೇನು ಹುಳುಗಳ ದಿನಾಚರಣೆ: “ಜೇನು ಇಲ್ಲದ ಜಗತ್ತು ಇಲ್ಲ”

ಜೇನು ಹುಳಗಳನ್ನು ರಕ್ಷಿಸೋಣ, ಪ್ರಕೃತಿಯ ಸಮತೋಲನ ಉಳಿಸೋಣ
ಬಾಗಲಕೋಟೆ, ಮೇ 20:“ವಿಶ್ವ ಜೇನು ಹುಳುಗಳ ದಿನಾಚರಣೆ” ಅಂಗವಾಗಿ ಪರಿಸರ ಸಂರಕ್ಷಣೆ, ಕೃಷಿ ಅಭಿವೃದ್ಧಿ ಮತ್ತು ಜೀವ ವೈವಿಧ್ಯತೆಯಲ್ಲಿ ಜೇನು ಹುಳಗಳ ಮಹತ್ವದ ಕುರಿತು ಜಾಗೃತಿ ಮೂಡಿಸುವ ಅಗತ್ಯ ಇದೆ ಎಂದು ಪರಿಸರ ಪ್ರೇಮಿಗಳು ಅಭಿಪ್ರಾಯಪಟ್ಟಿದ್ದಾರೆ.

“ಈ ರಾಷ್ಟ್ರಕ್ಕೆ ರೈತ ಬೆನ್ನೆಲುಬು. ರೈತರಿಗೆ ಬೆನ್ನೆಲುಬಾಗಿ ನಿಲ್ಲುವ ಕೀಟ ಯಾವುದಾದರೂ ಇದ್ದರೆ ಅದು ಜೇನು ಹುಳ” ಎಂದು ಅವರು ಹೇಳಿದರು.

ರೈತರು ಬೆಳೆಗಳನ್ನು ಬೆಳೆಸಿದರೂ, ಪರಾಗಸ್ಪರ್ಶದ ಮೂಲಕ ಬೆಳೆಗಳ ಇಳುವರಿ ಹೆಚ್ಚಿಸುವಲ್ಲಿ ಜೇನು ಹುಳಗಳ ಪಾತ್ರ ಅಪಾರವಾಗಿದೆ. ಜಗತ್ತಿನ ಜೀವ ವೈವಿಧ್ಯತೆಯನ್ನು ಉಳಿಸುವಲ್ಲಿ ಜೇನು ಹುಳಗಳು ಮಹತ್ವದ ಪಾತ್ರ ವಹಿಸುತ್ತಿವೆ. ಜೇನು ಹುಳಗಳ ನಾಶದಿಂದ ಮಾನವ ಜೀವಕ್ಕೂ ಅಪಾಯ ಎದುರಾಗಬಹುದು ಎಂಬ ಎಚ್ಚರಿಕೆಯನ್ನು ಹಲವು ವಿಜ್ಞಾನಿಗಳು ನೀಡಿರುವುದಾಗಿ ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಅತಿಯಾದ ಕೀಟನಾಶಕ ಬಳಕೆ, ಅರಣ್ಯ ನಾಶ ಮತ್ತು ಜೇನುಗೂಡುಗಳಿಗೆ ಬೆಂಕಿ ಹಚ್ಚುವ ಘಟನೆಗಳಿಂದ ಜೇನು ಹುಳಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇದು ಪರಿಸರ ಸಮತೋಲನಕ್ಕೆ ದೊಡ್ಡ ಹೊಡೆತವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರಕೃತಿಯಲ್ಲಿ ಪರಾಗಸ್ಪರ್ಶ ಅತ್ಯಂತ ಮಹತ್ವದ್ದಾಗಿದ್ದು, ಸಸ್ಯಗಳ ಸಂತಾನೋತ್ಪತ್ತಿ ಮತ್ತು ಆಮ್ಲಜನಕ ಉತ್ಪಾದನೆಗೆ ಜೇನು ಹುಳಗಳು ನೆರವಾಗುತ್ತವೆ. ಜೀವ ಸರಪಳಿಯ ಪ್ರತಿಯೊಂದು ಕೊಂಡಿಯೂ ಅಮೂಲ್ಯವಾಗಿದ್ದು, ಅದರಲ್ಲಿ ಜೇನು ಹುಳಗಳ ಸ್ಥಾನ ವಿಶೇಷವಾಗಿದೆ ಎಂದು ಹೇಳಿದರು.

ಜೇನು ಹುಳಗಳಲ್ಲಿ ಹೆಚ್ಚೇನು, ಕೋಲ್ವೇನು (ಜವಾರಿ ಜೇನು), ತುಡುವೆ ಜೇನು, ಮುಜಂಟಿ (ನಸರೇ ಜೇನು) ಹಾಗೂ ಯೂರೋಪಿಯನ್ ಮೆಲ್ಲಿ ಫೆರಾ ಸೇರಿದಂತೆ ಹಲವು ಪ್ರಭೇದಗಳಿವೆ. ಒಂದು ಜೇನುಗೂಡಿನಲ್ಲಿ ರಾಣಿ ಹುಳ, ಕೆಲಸಗಾರ ಹುಳ ಹಾಗೂ ಗಂಡು ಹುಳ ಎಂಬ ಮೂರು ವಿಧದ ಹುಳಗಳು ಇರುತ್ತವೆ.

ರಾಣಿ ಹುಳ ಗೂಡಿನ ನಿರ್ವಹಣೆ ಮತ್ತು ಸಂತಾನೋತ್ಪತ್ತಿಯ ಹೊಣೆ ಹೊತ್ತಿರುತ್ತದೆ. ಕೆಲಸಗಾರ ಹುಳಗಳು ಆಹಾರ ಸಂಗ್ರಹಣೆ, ಗೂಡು ನಿರ್ಮಾಣ ಮತ್ತು ಮರಿಗಳ ಪಾಲನೆ ಮಾಡುತ್ತವೆ. ಗಂಡು ಹುಳಗಳ ಮುಖ್ಯ ಕಾರ್ಯ ಸಂತಾನೋತ್ಪತ್ತಿ ಎಂದು ವಿವರಿಸಿದರು.

ಜೇನು ಹುಳಗಳು ತಾವಾಗಿಯೇ ದಾಳಿ ಮಾಡುವುದಿಲ್ಲ. ಅವುಗಳಿಗೆ ತೊಂದರೆ ನೀಡಿದಾಗ ಮಾತ್ರ ಆತ್ಮರಕ್ಷಣೆಗೆ ಮುಂದಾಗುತ್ತವೆ. ಗೂಡಿನ ರಕ್ಷಣೆಗೆ ತಮ್ಮ ಪ್ರಾಣವನ್ನೇ ತ್ಯಾಗ ಮಾಡುವ ಗುಣ ಜೇನು ಹುಳಗಳಿಗೆ ಇದೆ ಎಂದು ಹೇಳಿದರು.

ಶುದ್ಧ ಜೇನುತುಪ್ಪ ಆರೋಗ್ಯಕ್ಕೆ ಅತ್ಯಂತ ಉಪಯುಕ್ತವಾಗಿದ್ದು, ಹಲವು ಕಾಯಿಲೆಗಳಿಗೆ ಔಷಧೀಯ ಗುಣ ಹೊಂದಿದೆ. ಆದರೆ ಇತ್ತೀಚೆಗೆ ಮಾರುಕಟ್ಟೆಯಲ್ಲಿ ಕಲಬೆರಕೆ ಜೇನುತುಪ್ಪ ಹೆಚ್ಚಾಗಿರುವುದು ವಿಷಾದನೀಯ ಸಂಗತಿ ಎಂದರು.

“ಒಂದು ಜೇನುಗೂಡು ಸಾಕಿದರೆ ನೂರು ರೈತರನ್ನು ರಕ್ಷಿಸಿದಂತೆ, ಒಂದು ಜೇನುಗೂಡನ್ನು ಹಾಳು ಮಾಡಿದರೆ ಹತ್ತು ರೈತರನ್ನು ಕೊಂದಂತೆ” ಎಂದು ಹೇಳಿ, ಜೇನು ಹುಳಗಳ ರಕ್ಷಣೆಗಾಗಿ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಅರಣ್ಯ ಸಂಪತ್ತನ್ನು ಉಳಿಸಿ, ಜೇನು ಹುಳಗಳನ್ನು ಸಂರಕ್ಷಿಸುವ ಮೂಲಕ ಪರಿಸರ ಮತ್ತು ಮಾನವ ಬದುಕನ್ನು ಕಾಪಾಡೋಣ ಎಂದು ಕರೆ ನೀಡಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬಾಗಲಕೋಟೆ ಕುರುಬರ ಸಂಘದ ಜಿಲ್ಲಾ ಅಧ್ಯಕ್ಷ ಸ್ಥಾನದಿಂದ ಡಿ.ಬಿ. ಸಿದ್ದಾಪುರರನ್ನು ವಿಮುಕ್ತಿಗೊಳಿಸಿ ಆದೇಶ

ಬಾಗಲಕೋಟೆಯಲ್ಲಿ ವಿಜಯೇಂದ್ರ ಸಮ್ಮುಖದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬಿಜೆಪಿ ಸೇರ್ಪಡೆ

ಬಾಗಲಕೋಟೆ ಉಪಚುನಾವಣೆ: ಸಿಎಂ ಸಿದ್ದರಾಮಯ್ಯ ಭೇಟಿ – ಮಲ್ಲಿಕಾರ್ಜುನ ಚರಂತಿಮಠ ಮನೆಗೆ ಆಗಮನ ರಾಜಕೀಯ ಚರ್ಚೆಗೆ ಕಾರಣ