ಸಿದ್ದರಾಮಯ್ಯರನ್ನು ದೆಹಲಿಗೆ ಕಳುಹಿಸಿದರೆ ಕಾಂಗ್ರೆಸ್‌ಗೆ ರಾಜಕೀಯ ಹಿನ್ನಡೆ?
ಸಿದ್ದರಾಮಯ್ಯರನ್ನು ದೆಹಲಿಗೆ ಕಳುಹಿಸಿದರೆ ಕಾಂಗ್ರೆಸ್‌ಗೆ ರಾಜಕೀಯ ಹಿನ್ನಡೆ?
2004ರ ಇತಿಹಾಸ ಮರುಕಳಿಸುವ ಆತಂಕ!
ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ಮತ್ತೆ ನಾಯಕತ್ವದ ಬದಲಾವಣೆ ಕುರಿತ ಚರ್ಚೆಗಳು ಜೋರಾಗುತ್ತಿರುವ ನಡುವೆಯೇ, 2004ರ ರಾಜಕೀಯ ಬೆಳವಣಿಗೆಗಳನ್ನು ಹಲವರು ನೆನಪಿಸಿಕೊಳ್ಳುತ್ತಿದ್ದಾರೆ. ಆಗ ನಡೆದ ಘಟನೆಗಳು ಇಂದಿನ ಪರಿಸ್ಥಿತಿಯೊಂದಿಗೆ ಹೋಲಿಕೆ ಆಗುತ್ತಿರುವುದು ಕಾಂಗ್ರೆಸ್ ವಲಯದಲ್ಲೂ ಚರ್ಚೆಗೆ ಕಾರಣವಾಗಿದೆ.
2004ರಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಒಟ್ಟಿಗೇ ನಡೆದಾಗ ಎಸ್ ಎಂ ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿತ್ತು. ಆದರೆ ಸರ್ಕಾರದ ಅವಧಿ ಪೂರ್ಣಗೊಳ್ಳುವ ಮೊದಲು ವಿಧಾನಸಭೆ ವಿಸರ್ಜನೆ ಮಾಡಿ ಚುನಾವಣೆಗೆ ಹೋಗುವ ನಿರ್ಧಾರ ಕೈಗೊಳ್ಳಲಾಗಿತ್ತು. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ಕರ್ನಾಟಕದಲ್ಲಿ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗಲಿಲ್ಲ.
ಆ ಸಮಯದಲ್ಲಿ ಕಾವೇರಿ ಹೋರಾಟ, ಡಾ. ರಾಜಕುಮಾರ್ ಅಪಹರಣ ಪ್ರಕರಣ, ರೈತರ ಚಳುವಳಿ, ವಿದ್ಯುತ್ ನೀತಿ ವಿರೋಧ ಮತ್ತು ನೀರಾ ಹೋರಾಟ ರಾಜ್ಯ ರಾಜಕೀಯದ ಮೇಲೆ ದೊಡ್ಡ ಪರಿಣಾಮ ಬೀರಿದ್ದವು. ವಿಶೇಷವಾಗಿ ಪ್ರೊಫೆಸರ್ ಎಂಡಿ ನಂಜುಂಡಸ್ವಾಮಿಯವರ ನೇತೃತ್ವದಲ್ಲಿ ನಡೆದ ರೈತರ ಹೋರಾಟ ಕಾಂಗ್ರೆಸ್ ವಿರುದ್ಧ ಅಸಮಾಧಾನ ಹೆಚ್ಚಿಸಿತ್ತು.
ಚನ್ನಪಟ್ಟಣದ ವಿಠಲೇನಹಳ್ಳಿಯಲ್ಲಿ ನಡೆದ ಗೋಲಿಬಾರ್ ಪ್ರಕರಣದ ಬಳಿಕ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಪಾದಯಾತ್ರೆ ನಡೆಸಿ ರಾಜ್ಯದಾದ್ಯಂತ ರಾಜಕೀಯ ಅಲೆ ಸೃಷ್ಟಿಸಿದ್ದರು. 1999ರಲ್ಲಿ ರಾಜಕೀಯವಾಗಿ ಹಿನ್ನಡೆ ಕಂಡಿದ್ದ ಜೆಡಿಎಸ್, ದೇವೇಗೌಡರು ಮತ್ತು ಸಿದ್ದರಾಮಯ್ಯರ ಸಂಘಟನಾ ಶಕ್ತಿಯಿಂದ ಮತ್ತೆ ಬಲ ಪಡೆದಿತ್ತು.
ನಂತರ ಜೆಡಿಎಸ್ 52 ಸ್ಥಾನಗಳನ್ನು ಗೆದ್ದು ಕಿಂಗ್‌ಮೇಕರ್ ಆಗಿ ಹೊರಹೊಮ್ಮಿತು. ಕಾಂಗ್ರೆಸ್ ಜೊತೆ ಸಮ್ಮಿಶ್ರ ಸರ್ಕಾರ ರಚನೆಯಾಗಿ ಧರ್ಮಸಿಂಗ್ ಮುಖ್ಯಮಂತ್ರಿ ಹಾಗೂ ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾದರು. ಆದರೆ ಒಳರಾಜಕೀಯ ಭಿನ್ನಾಭಿಪ್ರಾಯಗಳಿಂದ ಸಿದ್ದರಾಮಯ್ಯ ಮತ್ತು ದೇವೇಗೌಡರ ನಡುವೆ ಅಂತರ ಉಂಟಾಗಿ, ಕೊನೆಗೆ ಸಿದ್ದರಾಮಯ್ಯ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದರು.
ಸಿದ್ದರಾಮಯ್ಯ ಕಾಂಗ್ರೆಸ್ ಸೇರಿದ ನಂತರ ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ಮತ್ತೆ ಬಲ ಪಡೆದಿತ್ತು ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ. ಗ್ರಾಮೀಣ ಮತದಾರರು, ಹಿಂದುಳಿದ ವರ್ಗಗಳು ಮತ್ತು ಅಹಿಂದ ಮತಬ್ಯಾಂಕ್ ಕಾಂಗ್ರೆಸ್ ಕಡೆಗೆ ಮರಳಿದ ಪರಿಣಾಮ 2009ರಲ್ಲಿ ಪಕ್ಷಕ್ಕೆ ನೂರಕ್ಕೂ ಹೆಚ್ಚು ಸ್ಥಾನಗಳು ಸಿಕ್ಕವು ಎಂಬ ಚರ್ಚೆ ಇಂದಿಗೂ ರಾಜಕೀಯ ವಲಯದಲ್ಲಿ ಕೇಳಿಬರುತ್ತದೆ.
ಇದೀಗ ಸಿದ್ದರಾಮಯ್ಯರನ್ನು ರಾಷ್ಟ್ರ ರಾಜಕಾರಣಕ್ಕೆ ಕಳುಹಿಸುವ ಸಾಧ್ಯತೆಗಳ ಕುರಿತು ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿ, ಕಾಂಗ್ರೆಸ್ ಮತ್ತೆ ಅದೇ ರೀತಿಯ ರಾಜಕೀಯ ಸವಾಲು ಎದುರಿಸಬಹುದೇ ಎಂಬ ಪ್ರಶ್ನೆ ಉದ್ಭವಿಸಿದೆ.
ರಾಜ್ಯ ಮಟ್ಟದಲ್ಲಿ ಬಲವಾದ ನಾಯಕತ್ವದ ಬದಲಾವಣೆ ಕಾಂಗ್ರೆಸ್ ಸಂಘಟನೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ವಿಶೇಷವಾಗಿ ಗ್ರಾಮೀಣ ಭಾಗ, ರೈತ ಸಮುದಾಯ ಹಾಗೂ ಅಹಿಂದ ಮತಬ್ಯಾಂಕ್ ಮೇಲೆ ಅದರ ಪರಿಣಾಮ ಬೀಳಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.
2028ರ ಚುನಾವಣೆಯ ದೃಷ್ಟಿಯಿಂದ ಕಾಂಗ್ರೆಸ್‌ಗೆ ಇದು ಮಹತ್ವದ ತಿರುವಾಗಬಹುದು. ಆಡಳಿತ ವಿರೋಧಿ ಅಲೆ, ಒಳರಾಜಕೀಯ ಅಸಮಾಧಾನ ಮತ್ತು ನಾಯಕತ್ವದ ಗೊಂದಲ ಹೆಚ್ಚಾದರೆ ರಾಜ್ಯ ರಾಜಕೀಯದಲ್ಲಿ ದೊಡ್ಡ ಬದಲಾವಣೆಗಳಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಅಡಿವೆಪ್ಪ ಸರೂರ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ