ಸಿದ್ದರಾಮಯ್ಯ ನಿರ್ಧಾರ ಏನು? ಡಿಕೆಶಿ ಕನಸು ನನಸಾಗುತ್ತದೆಯೇ?

ದೆಹಲಿ: ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿರುವ ಹಿನ್ನೆಲೆ, ಕರ್ನಾಟಕ ಕಾಂಗ್ರೆಸ್ ವಲಯದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗಳು ತೀವ್ರಗೊಂಡಿವೆ. ಸಿಎಂ ಸಿದ್ದರಾಮಯ್ಯ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡುವ ಕುರಿತು ಹೈಕಮಾಂಡ್ ಮಟ್ಟದಲ್ಲಿ ಗಂಭೀರ ಚರ್ಚೆಗಳು ನಡೆದಿವೆ ಎನ್ನುವ ಮಾಹಿತಿ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಅಂತಿಮ ಮಾತುಕತೆ ಬಳಿಕವೇ ಸಿದ್ದರಾಮಯ್ಯ ಅವರು ಅಧಿಕೃತ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ ಎಂದು ಮೂಲಗಳು ಸೂಚಿಸಿವೆ.

ಇನ್ನೊಂದೆಡೆ, ಹಲವು ವರ್ಷಗಳಿಂದ ಮುಖ್ಯಮಂತ್ರಿ ಹುದ್ದೆಯ ನಿರೀಕ್ಷೆಯಲ್ಲಿದ್ದ ಡಿ.ಕೆ. ಶಿವಕುಮಾರ್ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿದೆ. ಇತ್ತೀಚಿನ ಉನ್ನತ ಮಟ್ಟದ ಸಭೆಯಲ್ಲಿ ಪ್ರಿಯಾಂಕ ಗಾಂಧಿ ಅವರು ಡಿ.ಕೆ. ಶಿವಕುಮಾರ್ ಪರವಾಗಿ ಬೆಂಬಲ ಸೂಚಿಸಿದ್ದು, ಈ ವಿಚಾರದಲ್ಲಿ ಹೈಕಮಾಂಡ್ ಮನವೊಲಿಸುವ ಪ್ರಯತ್ನ ನಡೆದಿದೆಯೆಂಬ ಮಾಹಿತಿ ಲಭ್ಯವಾಗಿದೆ.

ರಾಜ್ಯದಲ್ಲಿ ಹೊಸ ಸಮತೋಲನ ಸಾಧಿಸುವ ಉದ್ದೇಶದಿಂದ, ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕೇರಿದಲ್ಲಿ ವಿವಿಧ ಸಮುದಾಯಗಳನ್ನು ಪ್ರತಿನಿಧಿಸುವ ನಾಲ್ವರು ಉಪಮುಖ್ಯಮಂತ್ರಿಗಳನ್ನು ನೇಮಕ ಮಾಡುವ ಚಿಂತನೆ ಕೂಡ ನಡೆದಿದೆ ಎನ್ನಲಾಗಿದೆ. ದಲಿತ, ಅಲ್ಪಸಂಖ್ಯಾತ, ಲಿಂಗಾಯತ ಹಾಗೂ ಒಬಿಸಿ ಸಮುದಾಯಗಳಿಗೆ ಪ್ರಾಮುಖ್ಯತೆ ನೀಡುವ ಸಾಧ್ಯತೆಗಳ ಕುರಿತು ರಾಜಕೀಯ ವಲಯದಲ್ಲಿ ಚರ್ಚೆಗಳು ಜೋರಾಗಿವೆ. ಇದೇ ವೇಳೆ, ಹಿರಿಯ ನಾಯಕ ಸತೀಶ್ ಜಾರಕಿಹೊಳಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವ ಕುರಿತು ಸಹ ಮಾತುಕತೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.

ಇಂದು ನಡೆದ ಮಹತ್ವದ ಮ್ಯಾರಥಾನ್ ಸಭೆಯಲ್ಲಿ ಕೆಲವು ಹಿರಿಯ ಸಚಿವರ ಕಾರ್ಯವೈಖರಿ ಕುರಿತು ರಾಹುಲ್ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದು, ಸಚಿವ ಸಂಪುಟದಲ್ಲಿ ದೊಡ್ಡ ಮಟ್ಟದ ಬದಲಾವಣೆಗಳ ಸಾಧ್ಯತೆ ಹೆಚ್ಚಿದೆ ಎಂದು ಮೂಲಗಳು ತಿಳಿಸಿವೆ. ಯುವ ನಾಯಕರು ಹಾಗೂ ಹೊಸ ಮುಖಗಳಿಗೆ ಹೆಚ್ಚಿನ ಅವಕಾಶ ನೀಡುವ ಚಿಂತನೆ ಕಾಂಗ್ರೆಸ್ ಹೈಕಮಾಂಡ್‌ನಲ್ಲಿ ನಡೆಯುತ್ತಿದೆ ಎನ್ನಲಾಗಿದೆ.

ಇದಲ್ಲದೆ, ಸಿಎಂ ಸಿದ್ದರಾಮಯ್ಯ ಅವರಿಗೆ ರಾಜ್ಯಸಭೆ ಸ್ಥಾನವನ್ನು ಆಫರ್ ಮಾಡಲಾಗಿತ್ತು ಎಂಬ ಮಾತುಗಳು ಕೇಳಿಬಂದಿದ್ದರೂ, ಅದನ್ನು ಅವರು ವಿನಯಪೂರ್ವಕವಾಗಿ ನಿರಾಕರಿಸಿದ್ದಾರೆ ಎನ್ನಲಾಗಿದೆ. ಇದೇ ಸಂದರ್ಭದಲ್ಲಿ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಅಥವಾ ಪ್ರಮುಖ ಖಾತೆ ನೀಡುವ ಕುರಿತು ಚರ್ಚೆಗಳು ನಡೆದಿವೆ ಎಂಬ ಮಾಹಿತಿ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ವರದಿ :ಅಡಿವೆಪ್ಪ ಸರೂರ

ಕಾಮೆಂಟ್‌ಗಳು