ನಾನು ಶಾಸಕನಲ್ಲ, ನೀವುಗಳೇ ಶಾಸಕರು

ಬಾಗಲಕೋಟೆ, ಮೇ 20: “ನಮ್ಮ ತಂದೆ ಇದೇ ಬಿಲಕೆರೂರ ಗ್ರಾಮದಿಂದ ರಾಜಕೀಯ ಪ್ರವೇಶ ಮಾಡಿದ್ದರು. ಈ ಗ್ರಾಮದ ಜನರು ಅವರನ್ನು ಅಪಾರ ಪ್ರೀತಿಯಿಂದ ಬೆಳೆಸಿ, ಗ್ರಾಮದಿಂದ ದೆಹಲಿವರೆಗೆ ಕಳಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದರು. ಇಂದು ಅದೇ ಗ್ರಾಮದ ಜನರು ನನಗೂ ಆಶೀರ್ವಾದ ಮಾಡಿ ವಿಧಾನಸೌಧಕ್ಕೆ ಕಳಿಸಿದ್ದೀರಿ. ನಿಮ್ಮ ಈ ಪ್ರೀತಿ ಮತ್ತು ವಿಶ್ವಾಸವನ್ನು ನಾನು ಎಂದಿಗೂ ಮರೆಯುವುದಿಲ್ಲ,” ಎಂದು ಶಾಸಕ ಉಮೇಶ್ ಮೇಟಿ ಹೇಳಿದರು.
ಜನತೆಗೆ ಧನ್ಯವಾದ ತಿಳಿಸುವ ಕಾರ್ಯಕ್ರಮದ ಅಂಗವಾಗಿ ಬಿಲಕೆರೂರ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ಗ್ರಾಮದ ಜನರ ಬೆಂಬಲವನ್ನು ಸ್ಮರಿಸಿ ಭಾವುಕರಾದರು. “ನಮ್ಮ ತಂದೆಯವರ ಜೊತೆಗೆ ಈ ಗ್ರಾಮದ ಜನರು ಸದಾ ಬೆನ್ನಿಗೆ ನಿಂತು ಕೆಲಸ ಮಾಡಿದ್ದಾರೆ. ಅವರ ರಾಜಕೀಯ ಜೀವನದ ಪ್ರತಿಯೊಂದು ಹಂತದಲ್ಲೂ ಬಿಲಕೆರೂರ ಗ್ರಾಮದ ಆಶೀರ್ವಾದ ಇತ್ತು. ಅದೇ ರೀತಿ ಈ ಉಪ ಚುನಾವಣೆಯಲ್ಲೂ ನನಗೆ ಅತಿಹೆಚ್ಚಿನ ಮತಗಳನ್ನು ನೀಡಿ ಗೆಲ್ಲಿಸಿದ್ದೀರಿ,” ಎಂದು ಹೇಳಿದರು.
“ನಾನು ಶಾಸಕನಲ್ಲ, ನೀವುಗಳೇ ಶಾಸಕರು. ನಿಮ್ಮ ಆಶೀರ್ವಾದ ಹಾಗೂ ವಿಶ್ವಾಸದಿಂದ ನಾನು ಈ ಸ್ಥಾನಕ್ಕೆ ಬಂದಿದ್ದೇನೆ. ನಿಮ್ಮ ಗ್ರಾಮಗಳ ಅಭಿವೃದ್ಧಿ ಹಾಗೂ ಸಮಸ್ಯೆಗಳ ಪರಿಹಾರವೇ ನನ್ನ ಮೊದಲ ಆದ್ಯತೆಯಾಗಿದೆ. ಯಾವುದೇ ಗ್ರಾಮಕ್ಕೆ ಹೋಗಿದರೂ ಜನರ ಸಮಸ್ಯೆಗಳನ್ನು ಕೇಳಿ ಅಧಿಕಾರಿಗಳಿಗೆ ತಕ್ಷಣವೇ ಸೂಚನೆ ನೀಡುತ್ತಿದ್ದೇನೆ,” ಎಂದು ಹೇಳಿದರು.

ಗ್ರಾಮಸ್ಥರು ಕುಡಿಯುವ ನೀರು, ರಸ್ತೆ, ಸಾರಿಗೆ ಹಾಗೂ ವಿದ್ಯುತ್ ಸಮಸ್ಯೆಗಳ ಕುರಿತು ಶಾಸಕರ ಗಮನಕ್ಕೆ ತಂದರು. ಈ ವೇಳೆ ಸ್ಥಳದಲ್ಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿದ ಶಾಸಕ ಉಮೇಶ್ ಮೇಟಿ, ಸಾರ್ವಜನಿಕರ ಸಮಸ್ಯೆಗಳನ್ನು ಶೀಘ್ರದಲ್ಲಿ ಬಗೆಹರಿಸುವಂತೆ ಸೂಚನೆ ನೀಡಿದರು.

“ನಮ್ಮ ಬಾಗಲಕೋಟೆ ಮತಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಉದ್ದೇಶ ಹೊಂದಿದ್ದೇನೆ. ಯಾವ ಗ್ರಾಮದಲ್ಲಿ ಏನು ಕೆಲಸ ಆಗಬೇಕು ಎಂಬುದರ ಕುರಿತು ಈಗಾಗಲೇ ಪಟ್ಟಿ ಸಿದ್ಧಪಡಿಸುವ ಕಾರ್ಯ ನಡೆಯುತ್ತಿದೆ. ಶೀಘ್ರದಲ್ಲೇ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು,” ಎಂದು ಭರವಸೆ ನೀಡಿದರು.

ಈ ವೇಳೆ ಗ್ರಾಮಸ್ಥರು ಶಾಸಕ ಉಮೇಶ್ ಮೇಟಿ ಅವರಿಗೆ ಭರ್ಜರಿ ಸ್ವಾಗತ ಕೋರಿದರು. ಮಹಿಳೆಯರು ಆರತಿ ಬೆಳಗಿ ಸ್ವಾಗತಿಸಿದ್ದು, ಕಾರ್ಯಕರ್ತರು ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಬಸವಂತಪ್ಪ ಮೇಟಿ, ಎಸ್.ಎನ್. ರಾಂಪುರ, ಮಲ್ಲಿಕಾರ್ಜುನ ಮೇಟಿ, ಬಲರಾಮ ಪವರ್, ನಿಂಗಣ್ಣ ಕೋಟಿ, ಶಿವಾನಂದ ಅಫ್ಜಲಪುರ, ವೈ.ವೈ. ತಿಮ್ಮಾಪುರ, ಜಟ್ಟೆಪ್ಪ ಮಾದಾಪುರ ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬಾಗಲಕೋಟೆ ಕುರುಬರ ಸಂಘದ ಜಿಲ್ಲಾ ಅಧ್ಯಕ್ಷ ಸ್ಥಾನದಿಂದ ಡಿ.ಬಿ. ಸಿದ್ದಾಪುರರನ್ನು ವಿಮುಕ್ತಿಗೊಳಿಸಿ ಆದೇಶ

ಬಾಗಲಕೋಟೆಯಲ್ಲಿ ವಿಜಯೇಂದ್ರ ಸಮ್ಮುಖದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬಿಜೆಪಿ ಸೇರ್ಪಡೆ

ಬಾಗಲಕೋಟೆ ಉಪಚುನಾವಣೆ: ಸಿಎಂ ಸಿದ್ದರಾಮಯ್ಯ ಭೇಟಿ – ಮಲ್ಲಿಕಾರ್ಜುನ ಚರಂತಿಮಠ ಮನೆಗೆ ಆಗಮನ ರಾಜಕೀಯ ಚರ್ಚೆಗೆ ಕಾರಣ