7:20 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗಳಿಗೆ ಶಾಸಕ ಉಮೇಶ್ ಮೇಟಿ ಚಾಲನೆ
ಬಾಗಲಕೋಟೆ, ಜೂನ್ 25: ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆ (2025–26) ಅಡಿಯಲ್ಲಿ ₹7.20 ಕೋಟಿ ವೆಚ್ಚದ ವಿವಿಧ ರಸ್ತೆ ಅಭಿವೃದ್ಧಿ ಹಾಗೂ ಡಾಂಬರೀಕರಣ ಕಾಮಗಾರಿಗಳಿಗೆ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಉಮೇಶ್ ಎಚ್. ಮೇಟಿ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು.
ಈ ಯೋಜನೆಯಡಿ ಕಿರಸೂರ–ಮುಗಳೊಳ್ಳಿ ರಸ್ತೆ, ಮುಚಖಂಡಿ ಕ್ರಾಸ್‌ನಿಂದ ಬಸವೇಶ್ವರ ಸರ್ಕಲ್‌ವರೆಗೆ ರಸ್ತೆ, ಸಿಕ್ಕೇರಿ ಕೆ.ಎಚ್.ಬಿ. ಬಡಾವಣೆಯ ಆಂತರಿಕ ರಸ್ತೆಗಳು, ಕಮಗತಿ ಗ್ರಾಮದ ವಿಠೋಬಾ ದೇವಾಲಯದಿಂದ ರಾಜ್ಯ ಹೆದ್ದಾರಿ-44ಕ್ಕೆ ಸಂಪರ್ಕಿಸುವ ರಸ್ತೆ ಹಾಗೂ ಶಿರೂರ ಸಮೀಪದ ಹೇಮರೆಡ್ಡಿ ಮಲ್ಲಮ್ಮ ದೇವಾಲಯದಿಂದ ರಾಜ್ಯ ಹೆದ್ದಾರಿ-367ಕ್ಕೆ ಸಂಪರ್ಕಿಸುವ ರಸ್ತೆ ಸೇರಿದಂತೆ ಒಟ್ಟು ₹7.20 ಕೋಟಿ ಮೌಲ್ಯದ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಉಮೇಶ್ ಮೇಟಿ, ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸುಗಮ ಸಂಚಾರಕ್ಕೆ ಗುಣಮಟ್ಟದ ರಸ್ತೆ ನಿರ್ಮಾಣ ಅತ್ಯಗತ್ಯವಾಗಿದೆ. ಉತ್ತಮ ರಸ್ತೆ ಸಂಪರ್ಕವು ಪ್ರದೇಶದ ಸಮಗ್ರ ಅಭಿವೃದ್ಧಿಗೆ ನೆರವಾಗಲಿದ್ದು, ಸಾರ್ವಜನಿಕರಿಗೆ ಉತ್ತಮ ಮೂಲಸೌಕರ್ಯ ಒದಗಿಸುವುದು ಸರ್ಕಾರದ ಬದ್ಧತೆಯಾಗಿದೆ ಎಂದು ಹೇಳಿದರು. ಜೊತೆಗೆ ಗುತ್ತಿಗೆದಾರರು ಕಾಮಗಾರಿಗಳನ್ನು ಗುಣಮಟ್ಟದಿಂದ ಹಾಗೂ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಜಿ.ಪಂ. ಮಾಜಿ ಅಧ್ಯಕ್ಷ ಬಸವಂತಪ್ಪ ಮೇಟಿ, ನಗರಸಭೆ ಸದಸ್ಯೆ ಲಕ್ಷ್ಮಿ ಚೌಹಾನ್, ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಸ್.ಎಂ. ರಾಂಪೂರ, ದ್ಯಾಮಣ್ಣ ಗಾಳಿ, ನಾಗರಾಜ ಹದ್ಲಿ , ಬಲರಾಮ ಪವಾರ್ , ಲಕ್ಸಣ್ಣ ದಡ್ಡಿ, ಜಟ್ಟೆಪ್ಪ ಮಾದಾಪೂರ, ನಿಂಗಪ್ಪ ಕೋಟಿ, ಸಿದ್ದಪ್ಪ ಸುನಗದ, ಸಿದಪ್ಪ ಕೋಟಿಕಲ್, ರಂಗಪ್ಪ ಮಳ್ಳಿ , ಎಸ್ ಬಿ ಮಾಚಾ, ಮಂಜು ಮುಚಖಂಡಿ, ರಾಮು ರಾಕುಂಪಿ ಸೇರಿದಂತೆ ಹಲವು ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ