ಸಹಕಾರ ಕ್ಷೇತ್ರದ ಬೆಳವಣಿಗೆಗೆ ಅಗತ್ಯ ನೆರವು: ಉಮೇಶ್ ಮೇಟಿ
ಬಾಗಲಕೋಟೆ, ಜೂ.24: ತಾಲೂಕು ಒಕ್ಕುಲತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ ನಿಯಮಿತ, ಬಾಗಲಕೋಟೆ ಇವರ ವತಿಯಿಂದ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಉಮೇಶ್ ಹೆಚ್. ಮೇಟಿ ಅವರಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಉಮೇಶ್ ಮೇಟಿ ಅವರು, ತಮ್ಮ ತಂದೆ ದಿವಂಗತ ಎಚ್.ವೈ. ಮೇಟಿ ಅವರು ಈ ಸಂಘದ ಮೂಲಕವೇ ರಾಜಕೀಯ ಜೀವನಕ್ಕೆ ಪ್ರವೇಶಿಸಿ, ನಿರ್ದೇಶಕರಾಗಿ ಹಾಗೂ ಅಧ್ಯಕ್ಷರಾಗಿ ಸೇವೆ ಸಲ್ಲಿಸುವ ಮೂಲಕ ಸಂಘದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದರು ಎಂದು ಸ್ಮರಿಸಿದರು.
"ನಮ್ಮ ತಂದೆಯವರು ಈ ಸಹಕಾರಿ ಸಂಸ್ಥೆಯ ಬೆಳವಣಿಗೆಗಾಗಿ ಪ್ರಾಮಾಣಿಕವಾಗಿ ದುಡಿದಿದ್ದರು. ಅವರ ಆದರ್ಶಗಳನ್ನು ಮುಂದುವರಿಸಿಕೊಂಡು ನಾನು ಸಹ ಸರ್ಕಾರದ ಸಹಕಾರದೊಂದಿಗೆ ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಅಗತ್ಯ ನೆರವು ಹಾಗೂ ಸೇವೆ ನೀಡಲು ಬದ್ಧನಾಗಿದ್ದೇನೆ" ಎಂದು ಹೇಳಿದರು.
ಅವರು ಮುಂದುವರೆದು, 2013ರಲ್ಲಿ ತಮ್ಮ ತಂದೆ ಎಚ್.ವೈ. ಮೇಟಿ ಅವರ ಅಧ್ಯಕ್ಷತೆಯಲ್ಲಿ ಸಂಘದ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗಿತ್ತು. ಇಂದು ಆ ಕಟ್ಟಡ ಸಂಘದ ಪ್ರಗತಿ ಹಾಗೂ ಅಭಿವೃದ್ಧಿಯ ಪ್ರತೀಕವಾಗಿ ನಿಂತಿರುವುದು ಸಂತಸದ ಸಂಗತಿಯಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ವ್ಹಿ.ವೈ. ರಂಗಣ್ಣವರ, ಉಪಾಧ್ಯಕ್ಷ ಎಸ್.ಜಿ. ಹಿರೇಮಠ, ನಿರ್ದೇಶಕರಾದ ಮಂಜುನಾಥ ಬಿಲಕೇರಿ, ಮುತ್ತಪ್ಪ ಹುಗ್ಗಿ, ಲಕ್ಷಣ್ಣ ದಡ್ಡಿ, ವೈ.ವೈ. ತಿಮ್ಮಾಪುರ ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದು, ಶಾಸಕರನ್ನು ಸನ್ಮಾನಿಸಿ ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ರೈತರು, ಸದಸ್ಯರು ಹಾಗೂ ಗಣ್ಯರು ಭಾಗವಹಿಸಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ