ಎಸ್‌ಐಆರ್ ಕುರಿತು ಜನಜಾಗೃತಿ – ಗ್ರಾಮಸ್ಥರ ಅಹವಾಲು ಆಲಿಸಿದ ಶಾಸಕ ಉಮೇಶ್ ಮೇಟಿ
ಬಾಗಲಕೋಟೆ, ಜೂನ್ 29: ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ರಾಮತಾಲ, ಹೂವಿನಹಳ್ಳಿ, ಮುಳ್ಳೂರು, ನಿಂಬಲಗುಂದಿ, ಕಳ್ಳಿಗುಡ್ಡ, ಹಿರೇಮಾಗಿ, ಇನಾಂ ಬುದಿಹಾಳ ಹಾಗೂ ಬೆನಾಳ ಗ್ರಾಮಗಳಿಗೆ ಇಂದು ಶಾಸಕ ಉಮೇಶ್ ಎಚ್. ಮೇಟಿ ಭೇಟಿ ನೀಡಿ, ಗ್ರಾಮಸ್ಥರನ್ನು ಭೇಟಿಯಾಗಿ ಸಾರ್ವಜನಿಕ ಅಹವಾಲುಗಳನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ವಿವಿಧ ಗ್ರಾಮಗಳ ಮುಖಂಡರು ಹಾಗೂ ಗ್ರಾಮಸ್ಥರು ಶಾಸಕರಿಗೆ ಶಾಲು ಹೊದಿಸಿ, ಹಾರ ಹಾಕಿ ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಿದರು.
ಈ ವೇಳೆ ಮಾತನಾಡಿದ ಶಾಸಕ ಉಮೇಶ್ ಎಚ್. ಮೇಟಿ ಅವರು ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (Special Intensive Revision – SIR) ಕಾರ್ಯಕ್ರಮದ ಮಹತ್ವವನ್ನು ಸಾರ್ವಜನಿಕರಿಗೆ ವಿವರಿಸಿದರು. ಪ್ರತಿಯೊಬ್ಬ ಅರ್ಹ ನಾಗರಿಕರ ಹೆಸರು ಮತದಾರರ ಪಟ್ಟಿಯಲ್ಲಿ ನಿಖರವಾಗಿ ದಾಖಲಾಗಿರುವುದು ಪ್ರಜಾಪ್ರಭುತ್ವದ ಬಲವರ್ಧನೆಗೆ ಅತ್ಯಂತ ಅವಶ್ಯಕವಾಗಿದ್ದು, ಮತದಾನದ ಹಕ್ಕನ್ನು ಕಾಪಾಡಿಕೊಳ್ಳಲು ಪ್ರತಿಯೊಬ್ಬರೂ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ಹೆಸರು ತಿದ್ದುಪಡಿ, ವಿಳಾಸ ಬದಲಾವಣೆ, ಹೆಸರು ಕೈಬಿಡುವಿಕೆ ಸೇರಿದಂತೆ ಅಗತ್ಯ ತಿದ್ದುಪಡಿಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿಕೊಳ್ಳುವಂತೆ ಸಾರ್ವಜನಿಕರಿಗೆ ಮನವಿ ಮಾಡಿದರು. ಯಾವುದೇ ಅರ್ಹ ಮತದಾರ ಮತದಾನದ ಹಕ್ಕಿನಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಚುನಾವಣಾ ಆಯೋಗ ಈ ವಿಶೇಷ ಪರಿಷ್ಕರಣೆ ನಡೆಸುತ್ತಿದ್ದು, ಸಾರ್ವಜನಿಕರು ಅಗತ್ಯ ದಾಖಲೆಗಳೊಂದಿಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಸಹಕರಿಸುವಂತೆ ತಿಳಿಸಿದರು.
ಅಲ್ಲದೆ, ಮತದಾರರ ಪಟ್ಟಿಯಲ್ಲಿ ಕಂಡುಬರುವ ಲೋಪದೋಷಗಳನ್ನು ತಕ್ಷಣವೇ ಬೂತ್ ಮಟ್ಟದ ಅಧಿಕಾರಿಗಳ (BLO) ಗಮನಕ್ಕೆ ತಂದು, ಅಗತ್ಯ ದಾಖಲೆಗಳನ್ನು ಸಲ್ಲಿಸಿ ಸರಿಪಡಿಸಿಕೊಳ್ಳುವಂತೆ ತಿಳಿಸಿದರು. ಎಸ್‌ಐಆರ್ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಲು ಸಾರ್ವಜನಿಕರು, ಬೂತ್ ಮಟ್ಟದ ಅಧಿಕಾರಿಗಳು ಹಾಗೂ ಪಕ್ಷದ ಬಿಎಲ್‌ಎ-2 ಪ್ರತಿನಿಧಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕೆಂದು ಅವರು ಕರೆ ನೀಡಿದರು.
ಇದೇ ವೇಳೆ ಗ್ರಾಮಸ್ಥರು ಕುಡಿಯುವ ನೀರಿನ ಸಮಸ್ಯೆ, ಗ್ರಾಮಗಳ ಸ್ವಚ್ಛತೆ, ರಸ್ತೆ ದುರಸ್ತಿ, ರಸ್ತೆಗಳಲ್ಲಿ ಉಂಟಾಗಿರುವ ಗುಂಡಿಗಳು ಸೇರಿದಂತೆ ವಿವಿಧ ಮೂಲಭೂತ ಸೌಲಭ್ಯಗಳಿಗೆ ಸಂಬಂಧಿಸಿದ ಅಹವಾಲುಗಳನ್ನು ಶಾಸಕರ ಗಮನಕ್ಕೆ ತಂದರು. ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದ ಶಾಸಕ ಉಮೇಶ್ ಎಚ್. ಮೇಟಿ ಅವರು, ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಸಮಸ್ಯೆಗಳ ಶೀಘ್ರ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಕಾರ್ಯಕ್ರಮಗಳಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಸವಂತಪ್ಪ ಮೇಟಿ, ಬಾಯಕ್ಕ ಮೇಟಿ, ಮಲ್ಲಿಕಾರ್ಜುನ ಮೇಟಿ, ಎಸ್ ಎನ್ ರಾಂಪುರ , ಸಂಗಣ್ಣ ಹಂಡಿ , ಬಸವಂತಪ್ಪ ಅಂತರತಣಿ, ಮುತ್ತಣ್ಣ ಮುಳ್ಳೂರ, ರಮೇಶ್ ಕೊಳ್ಳಾರ, ವೈ. ವೈ. ತಿಮ್ಮಾಪುರ ಸೇರಿದಂತೆ ಗ್ರಾಮಗಳ ಹಿರಿಯರು, ಮಹಿಳೆಯರು, ಯುವಕರು, ಕಾಂಗ್ರೆಸ್ ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ