200 ಎಕರೆ ವಾಣಿಜ್ಯ ಮಾರುಕಟ್ಟೆ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಮನವಿ
ಬೆಂಗಳೂರು: ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಶಾಸಕ ಉಮೇಶ್ ಮೇಟಿ ಅವರು ಶುಕ್ರವಾರ ಬೆಂಗಳೂರಿನ ಮುಖ್ಯಮಂತ್ರಿ ಕಚೇರಿಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಹಾಗೂ ಆಡಳಿತಾತ್ಮಕ ಅನುಮೋದನೆ ನೀಡುವಂತೆ ಸಮಗ್ರ ಮನವಿ ಸಲ್ಲಿಸಿದರು.
ಮನವಿಯಲ್ಲಿ ಬಾಗಲಕೋಟೆ ನವನಗರ ಯುನಿಟ್–03ರಲ್ಲಿ ಸುಮಾರು 200 ಎಕರೆ ಪ್ರದೇಶದಲ್ಲಿ ಎಲ್ಲ ವ್ಯಾಪಾರಸ್ಥರನ್ನು ಒಂದೇ ಸಂಕೀರ್ಣದಲ್ಲಿ ಒಗ್ಗೂಡಿಸುವ ಆಧುನಿಕ ವಾಣಿಜ್ಯ ಮಾರುಕಟ್ಟೆ ನಿರ್ಮಿಸಲು ವಿಶೇಷ ಸಭೆ ಕರೆಯುವಂತೆ ಕೋರಲಾಗಿದೆ. ಕೃಷ್ಣಾ ನದಿಯ ಮುಳುಗಡೆಯ ನಂತರ ಹಳೆಯ ಬಾಗಲಕೋಟೆಯ ವ್ಯಾಪಾರ ಚಟುವಟಿಕೆಗಳು ವಿವಿಧೆಡೆ ಚದುರಿರುವುದರಿಂದ ನಗರದ ವಾಣಿಜ್ಯ ಚಟುವಟಿಕೆ ಕುಂಠಿತಗೊಂಡಿದ್ದು, ವ್ಯಾಪಾರಸ್ಥರನ್ನು ಒಂದೇ ಸೂರಿನಡಿ ತರಲು ಈ ಯೋಜನೆ ಅಗತ್ಯವಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಇದರೊಂದಿಗೆ ಬಾಗಲಕೋಟೆ ಹಳೇನಗರ, ನವನಗರ, ಕಮತಗಿ, ಅಮೀನಗಡ ಹಾಗೂ ಶಿರೂರ ನಗರಗಳಲ್ಲಿ ಸರ್ಕಾರಿ ಪ್ರೌಢ ಶಾಲೆಗಳನ್ನು ಹಾಗೂ ಬಾಗಲಕೋಟೆ ಹಳೇನಗರ, ನವನಗರ, ಅಮೀನಗಡ, ಕಮತಗಿ, ಶಿರೂರ ಮತ್ತು ಬೇವಿನಮಟ್ಟಿಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜುಗಳನ್ನು ಆರಂಭಿಸುವಂತೆ ಕೋರಲಾಗಿದೆ. ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ತಿಮ್ಮಾಪೂರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಹೆಚ್ಚುವರಿ ಕೊಠಡಿಗಳ ನಿರ್ಮಾಣ, ನವನಗರದ ಅಂಜುಮನ್ ಇಸ್ಲಾಂ ಸಮಿತಿಯ ಶಾಲಾ ಆವರಣದಲ್ಲಿ ರಸ್ತೆ ನಿರ್ಮಾಣ, ಅಮೀನಗಡ ಉರ್ದು ಶಾಲೆಯಲ್ಲಿ ಕೊಠಡಿಗಳ ನಿರ್ಮಾಣ, ಹೂವಿನಕೊಳ್ಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೆಚ್ಚುವರಿ ಕೊಠಡಿಗಳ ನಿರ್ಮಾಣ ಹಾಗೂ ಸುತಗುಂಡಾರ ಪ್ರಾಥಮಿಕ ಶಾಲೆಯ ಮೇಲ್ದಾವಣಿ ದುರಸ್ತಿಗೆ ಒಟ್ಟು ₹1.80 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಲಾಗಿದೆ.
ಅಲ್ಪಸಂಖ್ಯಾತರ ಸಮುದಾಯದ ಮೂಲಸೌಕರ್ಯ ಅಭಿವೃದ್ಧಿಗೆ ಕಮತಗಿ, ಬಿಲ್ಕೆರೂರು, ಅಮೀನಗಡ, ನವನಗರ ಹಾಗೂ ಶಿರೂರ ಪ್ರದೇಶಗಳಲ್ಲಿ ಶಾದಿಮಹಲ್ ನಿರ್ಮಾಣ ಮತ್ತು ಮುಂದುವರಿದ ಕಾಮಗಾರಿಗಳಿಗೆ ಅನುದಾನ ನೀಡುವಂತೆ ಕೋರಲಾಗಿದೆ. ಅಲ್ಲದೆ, ಬಾಗಲಕೋಟೆ ನವನಗರದ ವಾಂಬೆ ಕಾಲೋನಿ, ರಾಜೀವ್ ಗಾಂಧಿ ಕಾಲೋನಿ, ಆಶ್ರಯ ಕಾಲೋನಿ ಸೇರಿದಂತೆ ಕಮತಗಿ ಹಾಗೂ ಅಮೀನಗಡದ ಅಲ್ಪಸಂಖ್ಯಾತರ ಕಾಲೋನಿಗಳಲ್ಲಿ ಸಿಸಿ ರಸ್ತೆ, ಚರಂಡಿ, ಪೇವರ್ಸ್ ಹಾಗೂ ಇತರೆ ಮೂಲಭೂತ ಸೌಕರ್ಯ ಕಾಮಗಾರಿಗಳಿಗೆ ವಿಶೇಷ ಅನುದಾನ ಮಂಜೂರು ಮಾಡುವಂತೆ ಮನವಿ ಮಾಡಲಾಗಿದೆ.
ಇದೇ ವೇಳೆ, ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆ (CMIDP) ಅಡಿಯಲ್ಲಿ ಬಾಗಲಕೋಟೆ ಹಾಗೂ ಹುನಗುಂದ ತಾಲೂಕಿನ ವಿವಿಧ ರಸ್ತೆ ಮತ್ತು ಅಭಿವೃದ್ಧಿ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡುವಂತೆ ಕೋರಲಾಗಿದೆ. ಅಮೀನಗಡದಲ್ಲಿ ಕೃಷಿ ಹೊಂಡದಲ್ಲಿ ಮುಳುಗಿ ಮೃತಪಟ್ಟ ವಿದ್ಯಾರ್ಥಿಗಳಾದ ಮುದಿಯಪ್ಪ ಲಕ್ಷ್ಮಣ ಗಂಗೂರ ಹಾಗೂ ಸಂತೋಷ ಮಂಜುನಾಥ ಗಂಗೂರ ಅವರ ಕುಟುಂಬಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ತಲಾ ₹5 ಲಕ್ಷ ಪರಿಹಾರವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಮಂಜೂರು ಮಾಡುವಂತೆ ಮನವಿ ಸಲ್ಲಿಸಲಾಗಿದೆ.
ಈ ಸಂದರ್ಭದಲ್ಲಿ ಮಾಜಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯ್ ಕುಮಾರ್ ಸರನಾಯಕ್, ಕಾಂಗ್ರೆಸ್ ಯುವ ಮುಖಂಡ ಹೊಳೆಬಸು ಶೆಟ್ಟರ, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾಯಕ್ಕ ಮೇಟಿ ಸೇರಿದಂತೆ ಪಕ್ಷದ ಮುಖಂಡರು, ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ