ಜಮಖಂಡಿಯಲ್ಲಿ ₹40 ಸಾವಿರ ಲಂಚ ಸ್ವೀಕರಿಸುತ್ತಿದ್ದ ವೇಳೆ ಇಬ್ಬರು ಲೋಕಾಯುಕ್ತ ಬಲೆಗೆ
ಬಾಗಲಕೋಟೆ, ಜು. 27: ನಿವೃತ್ತ ನೌಕರರ ಪಿಂಚಣಿ ಹಾಗೂ ನಿವೃತ್ತಿ ಸೌಲಭ್ಯಗಳ ಕಡತ ವಿಲೇವಾರಿ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದಡಿ ಜಮಖಂಡಿ ತಾಲೂಕು ಖಜಾನೆ ಕಚೇರಿಯ ಇಬ್ಬರು ಅಧಿಕಾರಿಗಳನ್ನು ಕರ್ನಾಟಕ ಲೋಕಾಯುಕ್ತ ಪೊಲೀಸರು ಸೋಮವಾರ ಬಲೆಗೆ ಬೀಳಿಸಿದ್ದಾರೆ.
ಬಂಧಿತರನ್ನು ಎಸ್.ಎಸ್. ಬಿರಾದಾರ, ತಾಲೂಕು ಖಜಾನಾಧಿಕಾರಿ ಹಾಗೂ ವಿನಾಯಕ ಹೋನವಾಡ, ಖಜಾನೆ ಇಲಾಖೆಯ ಸಿಬ್ಬಂದಿ ಎಂದು ಗುರುತಿಸಲಾಗಿದೆ.ಜಮಖಂಡಿ ನಿವಾಸಿ ಚೇತನ ತರತರಿ ಅವರು ನೀಡಿದ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿದರು. ಅವರ ಮಾವನ ನಿವೃತ್ತಿಯ ನಂತರ ದೊರೆಯಬೇಕಾದ ಪಿಂಚಣಿ ಹಾಗೂ ನಿವೃತ್ತಿ ಸೌಲಭ್ಯಗಳನ್ನು ಮಂಜೂರು ಮಾಡಲು ಮೊದಲಿಗೆ ₹70 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಬಳಿಕ ₹40 ಸಾವಿರಕ್ಕೆ ಒಪ್ಪಂದ ಮಾಡಿಕೊಂಡಿದ್ದರೆಂದು ದೂರಿನಲ್ಲಿ ಆರೋಪಿಸಲಾಗಿದೆ.
ಫಿರ್ಯಾದಿದಾರರಿಂದ ₹40 ಸಾವಿರ ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಲೋಕಾಯುಕ್ತ ಡಿಎಸ್ಪಿ ಸುರೇಶರೆಡ್ಡಿ ಎಂ.ಎಸ್. ಅವರ ಮಾರ್ಗದರ್ಶನದಲ್ಲಿ ಪಿಐ ವಿ.ಎನ್. ಕಡಿ, ಪಿಐ ಎಂ.ಬಿ. ಬಿರಾದಾರ, ಪಿಐ ಎನ್.ಆರ್. ಖಿಲಾರೆ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.ಪ್ರಕರಣ ದಾಖಲಿಸಿಕೊಂಡಿರುವ ಲೋಕಾಯುಕ್ತ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ