ಹೆಣ್ಣುಮಕ್ಕಳ ಸುರಕ್ಷತೆ ಪ್ರತಿಯೊಬ್ಬರ ಜವಾಬ್ದಾರಿ: ಶಾಸಕ ಉಮೇಶ್ ಮೇಟಿ
ಬಾಗಲಕೋಟ :ಮೊಬೈಲ್ ತಂತ್ರಜ್ಞಾನ ಇಂದಿನ ಅಗತ್ಯವಾಗಿದ್ದರೂ, ಅದರ ದುರ್ಬಳಕೆ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಆದ್ದರಿಂದ ಮೊಬೈಲ್ ಅನ್ನು ಶಿಕ್ಷಣ ಮತ್ತು ಜ್ಞಾನಾರ್ಜನೆಗೆ ಸೀಮಿತಗೊಳಿಸಿ, ಡಿಜಿಟಲ್ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಬಾಗಲಕೋಟ ಶಾಸಕ ಉಮೇಶ್ ಎಚ್. ಮೇಟಿ ಹೇಳಿದರು.
ನಗರದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ "ಮೊಬೈಲ್ ಬಳಕೆಯ ಪರಿಣಾಮಗಳು ಮತ್ತು ಹೆಣ್ಣುಮಕ್ಕಳ ಸುರಕ್ಷತೆ" ಕುರಿತ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಯುವಜನತೆ, ವಿಶೇಷವಾಗಿ ವಿದ್ಯಾರ್ಥಿನಿಯರು, ಸಾಮಾಜಿಕ ಜಾಲತಾಣಗಳನ್ನು ಜವಾಬ್ದಾರಿಯಿಂದ ಬಳಸಬೇಕು. ಅಪರಿಚಿತರೊಂದಿಗೆ ವೈಯಕ್ತಿಕ ಮಾಹಿತಿ ಹಂಚಿಕೊಳ್ಳಬಾರದು. ಸೈಬರ್ ಅಪರಾಧಗಳ ಬಗ್ಗೆ ಅರಿವು ಹೊಂದಿ ಎಚ್ಚರಿಕೆಯಿಂದ ನಡೆದುಕೊಂಡರೆ ಮಾತ್ರ ಸುರಕ್ಷಿತ ಸಮಾಜ ನಿರ್ಮಾಣ ಸಾಧ್ಯ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಡಾ. ನಾಗಲಕ್ಷ್ಮಿ ಚೌದರಿ ಮಾತನಾಡಿ, ಹೆಣ್ಣುಮಕ್ಕಳು ಶಿಕ್ಷಣದ ಜೊತೆಗೆ ಆತ್ಮರಕ್ಷಣೆ, ಆರೋಗ್ಯ ಹಾಗೂ ಡಿಜಿಟಲ್ ಜಾಗೃತಿಯ ಅರಿವು ಬೆಳೆಸಿಕೊಳ್ಳುವುದು ಕಾಲದ ಅಗತ್ಯವಾಗಿದೆ. ಆತ್ಮವಿಶ್ವಾಸ ಮತ್ತು ಜಾಗೃತಿಯೇ ಮಹಿಳೆಯರ ನಿಜವಾದ ಶಕ್ತಿಯಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿನಿಯೂ ಉನ್ನತ ಗುರಿಯನ್ನು ಹೊಂದಿ ಜೀವನದಲ್ಲಿ ಸಾಧನೆ ಮಾಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಡಾ. ಶೇಖರ ಮಾನೆ, ಎಂ. ಎಸ್. ಬಡದಾನಿ, ನಾಗರಾಜ ಹದ್ಲಿ, ಮುತ್ತುರಾಜ್ ಅರಗಿನಶೆಟ್ಟ, ಅಕ್ಬರ್ ಮುಲ್ಲಾ, ಜಿ. ಡಿ. ಲಮಾಣಿ ಸೇರಿದಂತೆ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು, ಶಿಕ್ಷಕ ವೃಂದ, ವಿದ್ಯಾರ್ಥಿನಿಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ