ಪತ್ರಕರ್ತರ ಸೇವೆ ಪ್ರಜಾಪ್ರಭುತ್ವದ ಭದ್ರ ಅಡಿಪಾಯ – ಉಮೇಶ್ ಮೇಟಿ

ಬಾಗಲಕೋಟೆ: ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಪತ್ರಿಕೋದ್ಯಮ ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಜವಾಬ್ದಾರಿಯುತ ವೃತ್ತಿಯಾಗಿದ್ದು, ಪತ್ರಕರ್ತರು ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಬಾಗಲಕೋಟೆ ಶಾಸಕ ಉಮೇಶ್ ಮೇಟಿ ಹೇಳಿದರು.
ನಗರದ ನೂತನ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಜಂಟಿಯಾಗಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪತ್ರಕರ್ತರು ತಮ್ಮ ಕುಟುಂಬಕ್ಕಿಂತ ಸಮಾಜದ ಹಿತಾಸಕ್ತಿಗೆ ಹೆಚ್ಚಿನ ಆದ್ಯತೆ ನೀಡಿ ಹಗಲಿರುಳು ಸೇವೆ ಸಲ್ಲಿಸುತ್ತಾರೆ. ಅಂತಹ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿರುವುದು ಅವರ ಶೈಕ್ಷಣಿಕ ಬದುಕಿಗೆ ಮತ್ತಷ್ಟು ಪ್ರೇರಣೆ ನೀಡುವ ಶ್ಲಾಘನೀಯ ಕಾರ್ಯ ಎಂದು ಹೇಳಿದರು.
ಜಿಲ್ಲೆಯ ಹಿರಿಯ ಪತ್ರಕರ್ತರಾದ ದಿವಂಗತ ರಾಮ ಮನಗೂಳಿ, ದಿವಂಗತ ಶ್ರೀಶೈಲ ಅಂಗಡಿ ಸೇರಿದಂತೆ ಹಿರಿಯರ ಹೆಸರಿನಲ್ಲಿ ಅತ್ಯುತ್ತಮ ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ಅವರ ಸೇವೆಯನ್ನು ಸ್ಮರಿಸುವ ಜೊತೆಗೆ ಯುವ ಪತ್ರಕರ್ತರಿಗೆ ಸ್ಫೂರ್ತಿ ನೀಡುವ ಕಾರ್ಯವಾಗಿದೆ. ಪತ್ರಿಕೆ ವಿತರಕರ ಸೇವೆಯನ್ನು ಗುರುತಿಸಿ ಗೌರವಿಸುತ್ತಿರುವುದು ಸಹ ಅಭಿನಂದನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಮ್ಮ ತಂದೆ ದಿವಂಗತ ಎಚ್.ವೈ. ಮೇಟಿ ಅವರಿಗೆ ಪತ್ರಿಕೆಗಳ ಬಗ್ಗೆ ಅಪಾರ ಗೌರವವಿತ್ತು. ಪ್ರತಿದಿನ ಬೆಳಗ್ಗೆ ಪತ್ರಿಕೆ ಓದಿದ ಬಳಿಕವೇ ದಿನದ ಕಾರ್ಯ ಆರಂಭಿಸುತ್ತಿದ್ದರು. ಅವರಿಂದಲೇ ಪತ್ರಿಕೋದ್ಯಮದ ಮಹತ್ವವನ್ನು ಅರಿತುಕೊಂಡಿದ್ದೇನೆ ಎಂದು ಸ್ಮರಿಸಿದರು.
ಬಾಗಲಕೋಟೆ ಕ್ಷೇತ್ರದ ಸಮಗ್ರ ಅಭಿವೃದ್ಧಿ ಹಾಗೂ ಜನರ ಸಮಸ್ಯೆಗಳ ಪರಿಹಾರಕ್ಕಾಗಿ ಪತ್ರಕರ್ತರ ಸಲಹೆ, ಸಹಕಾರ ಮತ್ತು ರಚನಾತ್ಮಕ ವಿಮರ್ಶೆಯನ್ನು ಸದಾ ಸ್ವಾಗತಿಸುತ್ತೇನೆ. ಪತ್ರಿಕೋದ್ಯಮ ಎಂದರೆ ಕೇವಲ ಸಮಸ್ಯೆಗಳನ್ನು ಬಿಂಬಿಸುವುದಲ್ಲ; ಸಮಾಜದಲ್ಲಿ ನಡೆಯುತ್ತಿರುವ ಉತ್ತಮ ಕಾರ್ಯಗಳನ್ನು ಜನರ ಮುಂದೆ ತಂದು ಅಭಿವೃದ್ಧಿಗೆ ಪ್ರೇರಣೆ ನೀಡುವ ಜವಾಬ್ದಾರಿಯನ್ನೂ ಸಮರ್ಥವಾಗಿ ನಿಭಾಯಿಸುತ್ತಿದೆ ಎಂದು ಹೇಳಿದರು.

ಪತ್ರಕರ್ತರ ಯಾವುದೇ ನ್ಯಾಯಸಮ್ಮತ ಬೇಡಿಕೆಗಳಿದ್ದರೂ, ಅವುಗಳ ಪರಿಹಾರಕ್ಕೆ ತಾವು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಸದಾ ಸಹಕಾರ ನೀಡಲಿದ್ದಾರೆ ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರು, ಜಿಲ್ಲಾಧಿಕಾರಿ ಸಂಗಪ್ಪ, ಜಿಲ್ಲಾ ಪಂಚಾಯಿತಿ ಸಿಇಒ ಬಾಲೆ, ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಹೇಶ ಅಂಗಡಿ, ಈಶ್ವರ ಶೆಟ್ಟರ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿ.ಸಿ. ಲೋಕೇಶ್, ಪುಂಡಲೀಕ ಬಾಳೋಜಿ, ಕಸ್ತೂರಿ ಪಾಟೀಲ್ ಸೇರಿದಂತೆ  ಪತ್ರಕರ್ತರು  ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬಾಗಲಕೋಟೆ ಕುರುಬರ ಸಂಘದ ಜಿಲ್ಲಾ ಅಧ್ಯಕ್ಷ ಸ್ಥಾನದಿಂದ ಡಿ.ಬಿ. ಸಿದ್ದಾಪುರರನ್ನು ವಿಮುಕ್ತಿಗೊಳಿಸಿ ಆದೇಶ

ಬಾಗಲಕೋಟೆಯಲ್ಲಿ ವಿಜಯೇಂದ್ರ ಸಮ್ಮುಖದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬಿಜೆಪಿ ಸೇರ್ಪಡೆ

ಬಾಗಲಕೋಟೆ ಉಪಚುನಾವಣೆ: ಸಿಎಂ ಸಿದ್ದರಾಮಯ್ಯ ಭೇಟಿ – ಮಲ್ಲಿಕಾರ್ಜುನ ಚರಂತಿಮಠ ಮನೆಗೆ ಆಗಮನ ರಾಜಕೀಯ ಚರ್ಚೆಗೆ ಕಾರಣ