ಪತ್ರಕರ್ತರ ಸೋಗಿನಲ್ಲಿ ಸುಲಿಗೆ: ನಾಲ್ವರು ಯೂಟ್ಯೂಬರ್‌ಗಳ ಬಂಧನ
ಹುಕ್ಕೇರಿ: ಪತ್ರಕರ್ತರು ಹಾಗೂ ಪೊಲೀಸರ ಸೋಗಿನಲ್ಲಿ ವ್ಯಕ್ತಿಯೊಬ್ಬರನ್ನು ಬೆದರಿಸಿ ಹಣ ಸುಲಿಗೆ ಮಾಡಿದ ಆರೋಪದಡಿ ನಾಲ್ವರು ಯೂಟ್ಯೂಬರ್‌ಗಳನ್ನು ಹುಕ್ಕೇರಿ ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಜುಲೈ 18ರಂದು ಸಂಜೆ ಕೋಟಭಾಗಿ ಗ್ರಾಮದ ಮಹಿಬೂಬ್ ಬಾಬುಸಾಬ್ ಜಮಾದಾರ್ ಅವರಿಗೆ ಕಾಕತಿ ಮೂಲದ ವ್ಯಕ್ತಿಯೊಬ್ಬ ಗಾಂಜಾ ಚೀಟಗಳನ್ನು ಖರೀದಿಸುವಂತೆ ಒತ್ತಾಯಿಸಿ ಎರಡು ಚೀಟಗಳಿಗೆ ₹1,000 ನೀಡಿದ್ದನು. ಬಳಿಕ ಕಾರಿನಲ್ಲಿ ಬಂದ ನಾಲ್ವರು ಆರೋಪಿಗಳು ತಮ್ಮನ್ನು ಪೊಲೀಸರು ಎಂದು ಪರಿಚಯಿಸಿಕೊಂಡು ದೂರುದಾರರನ್ನು ಸಮೀಪದ ಕಬ್ಬಿನ ಗದ್ದೆಗೆ ಕರೆದೊಯ್ದು, ಗಾಂಜಾ ಮಾರಾಟ ಮಾಡುತ್ತಿರುವುದಾಗಿ ಆರೋಪಿಸಿ ಬೆದರಿಕೆ ಹಾಕಿದ್ದಾರೆ. ದೂರುದಾರರ ಬಳಿಯಿದ್ದ ಗಾಂಜಾ ಪೊಟ್ಟಣಗಳನ್ನು ಬಿಚ್ಚಿಸಿ ಫೋಟೋ ಹಾಗೂ ವಿಡಿಯೊ ಚಿತ್ರೀಕರಿಸಿ, ಅವರನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ಹುಕ್ಕೇರಿ ಪೊಲೀಸ್ ಠಾಣೆ ಸಮೀಪಕ್ಕೆ ಕರೆತಂದು, ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಸಿ ₹2 ಲಕ್ಷದಿಂದ ₹3 ಲಕ್ಷದವರೆಗೆ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಅಂತಿಮವಾಗಿ ದೂರುದಾರರಿಂದ ₹60 ಸಾವಿರ ನಗದು ಪಡೆದು, ಚಿತ್ರೀಕರಿಸಿದ ವಿಡಿಯೊವನ್ನು 'ಜಿ.ಡಿ. ಟಿವಿ' ಹೆಸರಿನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಸಂಬಂಧ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 164/2026ರಡಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 319(2), 318(4), 140(2) ಹಾಗೂ 3(6)ರಡಿ ಪ್ರಕರಣ ದಾಖಲಾಗಿತ್ತು. ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ. ರಾಮರಾಜನ್, ಹೆಚ್ಚುವರಿ ಎಸ್‌ಪಿ ಆರ್.ಬಿ. ಬಸರಗಿ ಹಾಗೂ ಡಿಎಸ್‌ಪಿ ರವಿ ಡಿ. ನಾಯಕ್ ಅವರ ಮಾರ್ಗದರ್ಶನದಲ್ಲಿ, ಪೊಲೀಸ್ ಇನ್‌ಸ್ಪೆಕ್ಟರ್ ಎಸ್.ಆರ್. ಗಣಾಚಾರಿ ನೇತೃತ್ವದ ತನಿಖಾ ತಂಡ ಜುಲೈ 24ರಂದು ಬೆಳಗಾವಿಯಲ್ಲಿ ಕಲ್ಲಪ್ಪ ಬಸವಣ್ಣಿ ಮಾಳಾಜ, ಮಲ್ಲಿಕಾರ್ಜುನ ಸಿದ್ದಪ್ಪ ಜುಲಫಿ, ಪೃಥ್ವಿರಾಜ್ ನಾರಾಯಣ ಚೌಹಾಣ್ ಹಾಗೂ ಡೇವಿಡ್ ಜಾಕೋಬ್ ತಂಗೇರಾಳ ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಿದೆ. ಆರೋಪಿಗಳಿಂದ ಮಹಾರಾಷ್ಟ್ರ ನೋಂದಣಿಯ ಮಾರುತಿ ಎರ್ಟಿಗಾ ಕಾರು, ಹೀರೋ ಎಚ್‌ಎಫ್ ಡಿಲಕ್ಸ್ ಬೈಕ್, ಎರಡು ಮೊಬೈಲ್ ಫೋನ್‌ಗಳು ಹಾಗೂ ಸುಲಿಗೆ ಮಾಡಿದ ₹34 ಸಾವಿರ ನಗದು ವಶಪಡಿಸಿಕೊಳ್ಳಲಾಗಿದ್ದು, ಬಳಿಕ ಅವರನ್ನು ಜೆಎಂಎಫ್‌ಸಿ ನ್ಯಾಯಾಲಯ, ಹುಕ್ಕೇರಿಗೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ