₹2,110 ಕೋಟಿ ಹೂಡಿಕೆ ವಂಚನೆ ಆರೋಪ: ಶಿವಂ ಅಸೋಸಿಯೇಟ್ಸ್ ಮುಖ್ಯಸ್ಥ ಇ.ಡಿ. ವಶಕ್ಕೆ
ಬೆಂಗಳೂರು: ಹೂಡಿಕೆದಾರರಿಗೆ ಪ್ರತಿ ತಿಂಗಳು ಶೇ.3ರಷ್ಟು ಲಾಭ ನೀಡುವುದಾಗಿ ಭರವಸೆ ನೀಡಿ ಸುಮಾರು ₹2,110 ಕೋಟಿ ವಂಚಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಶಿವಂ ಅಸೋಸಿಯೇಟ್ಸ್ ಸಂಸ್ಥೆಯ ಮುಖ್ಯಸ್ಥ ಶಿವಾನಂದ ಸಿದ್ದಪ್ಪ ನೀಲಣ್ಣವರ್ ಅವರನ್ನು ಜಾರಿ ನಿರ್ದೇಶನಾಲಯ(ಇ.ಡಿ.) ಬಂಧಿಸಿದೆ. ಆಗಸ್ಟ್ 13ರಂದು ಬಂಧಿಸಲಾಗಿದ್ದು, ನ್ಯಾಯಾಲಯವು 12 ದಿನಗಳ ಇ.ಡಿ. ಕಸ್ಟಡಿಗೆ ಒಪ್ಪಿಸಿದೆ.
ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ಆಧಾರದ ಮೇಲೆ ಇ.ಡಿ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ) ಅಡಿಯಲ್ಲಿ ತನಿಖೆ ಆರಂಭಿಸಿತ್ತು. ತನಿಖೆ ಮುಂದುವರಿದಂತೆ ಕರ್ನಾಟಕ, ಮಹಾರಾಷ್ಟ್ರ, ಗೋವಾ ಹಾಗೂ ಛತ್ತೀಸ್‌ಗಢದಲ್ಲಿ ಶಿವಂ ಅಸೋಸಿಯೇಟ್ಸ್ ದೊಡ್ಡ ಮಟ್ಟದ ಜಾಲ ಹೊಂದಿರುವುದು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾರ್ವಜನಿಕರಿಂದ ಹಣ ಸಂಗ್ರಹಿಸಲು ಸಂಸ್ಥೆ ಡಿಜಿಟಲ್ ವೇದಿಕೆಗಳು ಹಾಗೂ ಏಜೆಂಟರನ್ನು ಬಳಸಿಕೊಂಡಿತ್ತು ಎನ್ನಲಾಗಿದೆ. ಹೂಡಿಕೆದಾರರನ್ನು ಸಂಸ್ಥೆಯತ್ತ ಸೆಳೆಯುವ ಮಧ್ಯವರ್ತಿಗಳಿಗೆ ಶೇ.0.5ರಷ್ಟು ಕಮಿಷನ್ ನೀಡಲಾಗುತ್ತಿತ್ತು ಎಂದು ಇ.ಡಿ. ತಿಳಿಸಿದೆ.
2019ರಿಂದ ಷೇರು ಮಾರುಕಟ್ಟೆಯಲ್ಲಿ ಉಂಟಾದ ನಷ್ಟವನ್ನು ಮುಚ್ಚಿಡಲು ಹೊಸದಾಗಿ ಹೂಡಿಕೆ ಮಾಡಿದವರ ಹಣವನ್ನು ಹಳೆಯ ಹೂಡಿಕೆದಾರರಿಗೆ ಪಾವತಿಸುವ ಮೂಲಕ ಪೋನ್ಜಿ ಮಾದರಿಯಲ್ಲಿ ಹಣಕಾಸು ವ್ಯವಹಾರ ನಡೆಸಲಾಗಿದೆ ಎಂಬ ಆರೋಪವಿದೆ.
ತನಿಖೆಯ ಪ್ರಕಾರ, ಹೂಡಿಕೆದಾರರಿಂದ ಸಂಗ್ರಹಿಸಿದ ಹಣದ ಒಂದು ಭಾಗವನ್ನು ‘ಶಿವಂ ಸೇವಾ ಪ್ರೈವೇಟ್ ಲಿಮಿಟೆಡ್’, ‘ಶಿವಂ ಪ್ರೊಡಕ್ಷನ್ಸ್’ ಸೇರಿದಂತೆ ಹಲವು ಸಂಸ್ಥೆಗಳು ಹಾಗೂ ವೈಯಕ್ತಿಕ ಮತ್ತು ಕುಟುಂಬ ಸದಸ್ಯರ ಖಾತೆಗಳಿಗೆ ವರ್ಗಾಯಿಸಲಾಗಿತ್ತು ಎನ್ನಲಾಗಿದೆ.
ಈ ಹಣವನ್ನು ಐಷಾರಾಮಿ ಕಾರುಗಳ ಖರೀದಿ, ಬಂಗಲೆ ನಿರ್ಮಾಣ ಹಾಗೂ ಚಲನಚಿತ್ರ ನಿರ್ಮಾಣ ಸೇರಿದಂತೆ ವೈಯಕ್ತಿಕ ಮತ್ತು ಇತರೆ ಉದ್ದೇಶಗಳಿಗೆ ಬಳಸಿಕೊಂಡಿರುವುದಾಗಿ ಇ.ಡಿ. ಆರೋಪಿಸಿದೆ. ಪ್ರಕರಣದ ಹಣಕಾಸು ವ್ಯವಹಾರಗಳು ಹಾಗೂ ವಂಚನೆಯ ಜಾಲದ ಕುರಿತು ತನಿಖೆ ಮುಂದುವರಿದಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ