ಶಿರೂರು–ಕಮತಗಿ ಪಟ್ಟಣಗಳ ಅಭಿವೃದ್ಧಿಗೆ ₹7.58 ಕೋಟಿ: ಶಾಸಕ ಉಮೇಶ ಮೇಟಿ

ಶಿರೂರು/ಕಮತಗಿ: ಶಿರೂರು ಹಾಗೂ ಕಮತಗಿ ಪಟ್ಟಣಗಳ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗಿದ್ದು, ರಸ್ತೆ, ಕುಡಿಯುವ ನೀರು, ಚರಂಡಿ, ಸ್ವಚ್ಛತೆ ಹಾಗೂ ಇತರ ಮೂಲಸೌಕರ್ಯ ಕಾಮಗಾರಿಗಳಿಗೆ ಒಟ್ಟು ₹7.58 ಕೋಟಿ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಉಮೇಶ ಮೇಟಿ ಅವರು ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು.
ಶಿರೂರು ಪಟ್ಟಣ ಪಂಚಾಯಿತಿ ವತಿಯಿಂದ ₹3.96 ಕೋಟಿ ಹಾಗೂ ಕಮತಗಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ₹3.62 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಕಾಮಗಾರಿಗಳು ಪೂರ್ಣಗೊಂಡ ಬಳಿಕ ಎರಡೂ ಪಟ್ಟಣಗಳ ಮೂಲಸೌಕರ್ಯ ವ್ಯವಸ್ಥೆಯಲ್ಲಿ ಮತ್ತಷ್ಟು ಸುಧಾರಣೆ ಕಂಡುಬರಲಿದ್ದು, ಸಾರ್ವಜನಿಕರಿಗೆ ಅನುಕೂಲವಾಗಲಿದೆ.
ಶಿರೂರು ಪಟ್ಟಣದಲ್ಲಿ ನಗರೋತ್ಥಾನ ಯೋಜನೆ ಹಂತ–4, ಎನ್‌ಜಿಟಿ ಪರಿಸರ ಪರಿಹಾರ ನಿಧಿ ಹಾಗೂ ಸ್ವಚ್ಛ ಭಾರತ್ ಮಿಷನ್ (ಎಸ್‌ಬಿಎಂ) ಅನುದಾನದಡಿ ₹1.90 ಕೋಟಿ ವೆಚ್ಚದಲ್ಲಿ ಮಲ ಕೆಸರು ಸಂಸ್ಕರಣಾ ಘಟಕ ನಿರ್ಮಾಣ, ವಿಶೇಷಚೇತನ ಫಲಾನುಭವಿಗಳಿಗೆ ₹10.62 ಲಕ್ಷ ವೆಚ್ಚದಲ್ಲಿ ಯಂತ್ರಚಾಲಿತ ತ್ರಿಚಕ್ರ ವಾಹನಗಳ ಖರೀದಿ, ಮುಖ್ಯಮಂತ್ರಿ ಅಮೃತ ನಗರೋತ್ಥಾನ ಯೋಜನೆಯ ₹35 ಲಕ್ಷ ಉಳಿಕೆ ಅನುದಾನದಡಿ ಮೂರು ಕಾಮಗಾರಿಗಳು ಹಾಗೂ ಈಗಾಗಲೇ ಪ್ರಗತಿಯಲ್ಲಿರುವ ₹85 ಲಕ್ಷ ಶಾಸಕರ ವಿಶೇಷ ಅನುದಾನದ ಮೂರು ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ.
ಕಮತಗಿ ಪಟ್ಟಣದಲ್ಲಿ ವಿಠೋಬಾ ದೇವಸ್ಥಾನದಿಂದ ಸೇವಾಲಾಲ್ ಶಾಲೆಯವರೆಗೆ ರಸ್ತೆ ಅಭಿವೃದ್ಧಿ ಸೇರಿದಂತೆ ವಿವಿಧ ರಸ್ತೆ ಹಾಗೂ ಮೂಲಸೌಕರ್ಯ ಕಾಮಗಾರಿಗಳನ್ನು ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಹಾಗೂ ವಿವಿಧ ಇಲಾಖೆಗಳ ಯೋಜನೆಗಳಡಿ ಕೈಗೆತ್ತಿಕೊಳ್ಳಲಾಗಿದೆ.
ಭೂಮಿಪೂಜೆ ನೆರವೇರಿಸಿ ಮಾತನಾಡಿದ ಶಾಸಕ ಉಮೇಶ ಮೇಟಿ, ಶಿರೂರು ಹಾಗೂ ಕಮತಗಿ ಪಟ್ಟಣಗಳ ಅಭಿವೃದ್ಧಿಗೆ ಅಗತ್ಯವಿರುವ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಈಗಾಗಲೇ ಮಂಜೂರಾಗಿರುವ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಗುಣಮಟ್ಟದಿಂದ ಪೂರ್ಣಗೊಳಿಸುವುದರ ಜೊತೆಗೆ, ಸಾರ್ವಜನಿಕರ ಅಗತ್ಯತೆ ಹಾಗೂ ಸ್ಥಳೀಯ ಬೇಡಿಕೆಗಳಿಗೆ ಅನುಗುಣವಾಗಿ ಇನ್ನಷ್ಟು ಕಾಮಗಾರಿಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗುವುದು ಎಂದರು.

ಶಿರೂರಿಗೆ ₹65 ಕೋಟಿ ಕುಡಿಯುವ ನೀರಿನ ಯೋಜನೆ

ಶಿರೂರು ಪಟ್ಟಣಕ್ಕೆ ನಿರಂತರ ಕುಡಿಯುವ ನೀರು ಒದಗಿಸುವ ₹65 ಕೋಟಿ ವೆಚ್ಚದ ಸಮಗ್ರ ಯೋಜನೆಯ ಬೇಡಿಕೆಯ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಿ, ಅನುಮೋದನೆ ಹಾಗೂ ಅಗತ್ಯ ಅನುದಾನ ಮಂಜೂರು ಮಾಡಿಸಲು ಕ್ರಮ ಕೈಗೊಳ್ಳಲಾಗುವುದು. ಯೋಜನೆ ಅನುಷ್ಠಾನಗೊಂಡರೆ ಪಟ್ಟಣದ ಜನರಿಗೆ ಶಾಶ್ವತ ಹಾಗೂ ನಿರಂತರ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಸಾಧ್ಯವಾಗಲಿದೆ ಎಂದು ಅವರು ತಿಳಿಸಿದರು.

ಪಟ್ಟಣದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವುದರ ಜೊತೆಗೆ ಸ್ಥಗಿತಗೊಂಡಿರುವ ಕೆರೆಗೆ ನೀರು ತುಂಬಿಸುವ ಯೋಜನೆಗೆ ಮರುಚಾಲನೆ ನೀಡಲು ಕ್ರಮ ಕೈಗೊಳ್ಳಲಾಗುವುದು. ಶಿರೂರು ಏತ ನೀರಾವರಿ ಯೋಜನೆ ಅನುಷ್ಠಾನಕ್ಕೂ ಸರ್ಕಾರದ ಮಟ್ಟದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಶಿರೂರು ಪಟ್ಟಣ ಪಂಚಾಯಿತಿ ಕಚೇರಿ ಕಟ್ಟಡ ನಿರ್ಮಾಣಕ್ಕೆ ₹5 ಕೋಟಿ ಹಾಗೂ ಪಟ್ಟಣದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ₹10 ಕೋಟಿ ವಿಶೇಷ ಅನುದಾನ ಪಡೆಯಲು ಸಂಬಂಧಿಸಿದ ಸಚಿವರು ಹಾಗೂ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಮಂಜೂರಾತಿ ಪಡೆಯಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಮೇಟಿ ಹೇಳಿದರು.
ಕಮತಗಿ ಪಟ್ಟಣದ ಅಭಿವೃದ್ಧಿಗೆ ತಮ್ಮ ತಂದೆ ದಿವಂಗತ ಎಚ್.ವೈ. ಮೇಟಿಯವರು ಹಿಂದಿನಿಂದಲೂ ಹೆಚ್ಚಿನ ಕಾಳಜಿ ಹೊಂದಿದ್ದರು. ಪಟ್ಟಣದ ಅಭಿವೃದ್ಧಿಗಾಗಿ ಅವರು ಹಲವು ಕಾಮಗಾರಿಗಳಿಗೆ ಅನುದಾನ ಒದಗಿಸಿದ್ದರು. ಆದರೆ ವಿಧಿಯಾಟದಿಂದ ಕೆಲವು ಕಾಮಗಾರಿಗಳು ಅನುಷ್ಠಾನಗೊಳ್ಳಲು ಸಾಧ್ಯವಾಗಿರಲಿಲ್ಲ. ಇದೀಗ ಅವರ ಅಭಿವೃದ್ಧಿಯ ಆಶಯಗಳನ್ನು ಮುಂದುವರಿಸಿಕೊಂಡು ಜನರಿಗೆ ಅಗತ್ಯವಿರುವ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ ಎಂದು ಉಮೇಶ ಮೇಟಿ ಸ್ಮರಿಸಿದರು.
ಇದೇ ಸಂದರ್ಭದಲ್ಲಿ ಶಿರೂರಿನಲ್ಲಿ ಆರು ಮಂದಿ ಹಾಗೂ ಕಮತಗಿಯಲ್ಲಿ ನಾಲ್ವರು ವಿಶೇಷಚೇತನ ಫಲಾನುಭವಿಗಳಿಗೆ ಮುಖ್ಯಮಂತ್ರಿ ಅಮೃತ ನಗರೋತ್ಥಾನ ಯೋಜನೆಯ ಹಂತ–4ರ ಶೇ.5ರ ಅನುದಾನದಡಿ ಯಂತ್ರಚಾಲಿತ ತ್ರಿಚಕ್ರ ವಾಹನಗಳನ್ನು ವಿತರಿಸಲಾಯಿತು. ಪೌರಕಾರ್ಮಿಕ ಶಂಕರ ರಾಥೋಡ ಅವರಿಗೆ ಮನೆ ನಿರ್ಮಾಣಕ್ಕಾಗಿ ಆದೇಶ ಪತ್ರವನ್ನೂ ವಿತರಿಸಲಾಯಿತು.

ಕಾಮಗಾರಿಗಳ ಅನುಷ್ಠಾನದಲ್ಲಿ ಗುಣಮಟ್ಟಕ್ಕೆ ಯಾವುದೇ ರೀತಿಯ ರಾಜಿ ಮಾಡಿಕೊಳ್ಳಬಾರದು. ಸಾರ್ವಜನಿಕರ ಹಣದಲ್ಲಿ ನಡೆಯುವ ಅಭಿವೃದ್ಧಿ ಕಾಮಗಾರಿಗಳು ದೀರ್ಘಕಾಲ ಬಾಳಿಕೆ ಬರುವಂತೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಎರಡೂ ಪಟ್ಟಣಗಳ ಅಭಿವೃದ್ಧಿಗೆ ಸಾರ್ವಜನಿಕರ ಸಹಕಾರವೂ ಅಗತ್ಯವಾಗಿದೆ ಎಂದು ಶಾಸಕ ಮೇಟಿ ಹೇಳಿದರು.

ಈ ಸಂದರ್ಭದಲ್ಲಿ  ಶ್ರೀ ಹುಚ್ಚೇಶ್ವರ ಮಹಾಸ್ವಾಮಿಗಳು, ಶ್ರೀ ಶಿವಕುಮಾರ ಸ್ವಾಮಿಗಳು, ಮಾತೋಶ್ರೀ ಬಸವಣ್ಣೆಮ್ಮ ಬಸರಕೋಡ, ಶಿರೂರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶಿವಾನಂದ ಆಲೂರ, ವ್ಯವಸ್ಥಾಪಕ ವಿ.ವಿ. ವರದಪ್ಪನವರ, ನಾಮನಿರ್ದೇಶಿತ ಸದಸ್ಯರಾದ ಹಣಮಂತ ಅಡಿನ, ಜಗದೀಶ ದೇಸಾಯಿ, ಸಿದ್ದಪ್ಪ ಗಾಳಿ, ಮುಖಂಡರಾದ ರಂಗಪ್ಪ ಮಳ್ಳಿ, ಸುರೇಶ ರಾಜೂರ, ರಾಮನಗೌಡ ಮಾಚಾ, ಸಿದ್ದಪ್ಪ ಬಿಲ್ಲಾರ, ಅರ್ಜುನ ಅಂಗಡಿ, ಸಿದ್ದಪ್ಪ ಹಂಡರಗಲ್, ಸಿದ್ದಪ್ಪ ಮೇಳಿ, ವೈ.ವೈ. ತಿಮ್ಮಾಪುರ, ಎಂಜಿನಿಯರ್ ವಿರುಪಾಕ್ಷ ಚವಡಿ; ಕಮತಗಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಬಸವರಾಜ ಕುಂಬಳಾವತಿ, ಉಪಾಧ್ಯಕ್ಷೆ ನೇತ್ರಾವತಿ ನಿಂಬಲಗುಂದಿ, ಸದಸ್ಯ ದೇವಿಪ್ರಸಾದ ನಿಂಬಲಗುಂದಿ, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಸವಂತಪ್ಪ ಮೇಟಿ, ಮಾಜಿ ಪಪಂ ಅಧ್ಯಕ್ಷ ಮಹಾಂತೇಶ ಅಂಗಡಿ, ಮುಖ್ಯಾಧಿಕಾರಿ ಎಫ್.ಎನ್. ಹುಲ್ಲಿಕೇರಿ, ರಮೇಶ ಪದಕಿ, ಎಸ್.ಎಸ್. ಮಂಕಣಿ, ನಭಿ ತಹಶಿಲ್ದಾರ, ವಿದ್ಯಾಧರ ಮಳ್ಳಿ, ರಮೇಶ ಲಮಾಣಿ, ಸಿದ್ದು ಹೊಸಮನಿ ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರು, ಪಪಂ ಸದಸ್ಯರು, ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬಾಗಲಕೋಟೆ ಕುರುಬರ ಸಂಘದ ಜಿಲ್ಲಾ ಅಧ್ಯಕ್ಷ ಸ್ಥಾನದಿಂದ ಡಿ.ಬಿ. ಸಿದ್ದಾಪುರರನ್ನು ವಿಮುಕ್ತಿಗೊಳಿಸಿ ಆದೇಶ

ಬಾಗಲಕೋಟೆಯಲ್ಲಿ ವಿಜಯೇಂದ್ರ ಸಮ್ಮುಖದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬಿಜೆಪಿ ಸೇರ್ಪಡೆ

ಬಾಗಲಕೋಟೆ ಉಪಚುನಾವಣೆ: ಸಿಎಂ ಸಿದ್ದರಾಮಯ್ಯ ಭೇಟಿ – ಮಲ್ಲಿಕಾರ್ಜುನ ಚರಂತಿಮಠ ಮನೆಗೆ ಆಗಮನ ರಾಜಕೀಯ ಚರ್ಚೆಗೆ ಕಾರಣ