ಬರ ಪರಿಸ್ಥಿತಿ ಪರಿವೀಕ್ಷಣೆ: ಬೆಳೆಹಾನಿ ಸಮಗ್ರ ವರದಿ ಸಲ್ಲಿಸಲು ಸಚಿವ ಕಾಶಪ್ಪನವರ ಸೂಚನೆ

ಬಾಗಲಕೋಟೆ : ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಉಂಟಾಗಿರುವ ಬರ ಪರಿಸ್ಥಿತಿಯನ್ನು ಪರಿಶೀಲಿಸಲು ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ ಅವರು ಬುಧವಾರ ಜಿಲ್ಲೆಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆ ಹಾನಿಯನ್ನು ವೀಕ್ಷಿಸಿದರು.
ಇಳಕಲ್ ತಾಲೂಕಿನ ಹೆರೂರ ಗ್ರಾಮದ ರೈತ ಗಿರಿರಾಜ ದರಕ ಅವರ ತೊಗರಿ ಬೆಳೆ, ರಕ್ಕಸಗಿ ಗ್ರಾಮದ ರೈತ ಹುಲಗಪ್ಪ ತಳವಾರ ಅವರ ಹೆಸರು ಬೆಳೆ, ಗುಳೇದಗುಡ್ಡ ತಾಲೂಕಿನ ಬೂದನಗಡ ಗ್ರಾಮದ ತೊಗರಿ, ಸೂರ್ಯಕಾಂತಿ, ಸಜ್ಜೆ ಹಾಗೂ ಈರುಳ್ಳಿ ಬೆಳೆ, ಬಾಗಲಕೋಟೆ ತಾಲೂಕಿನ ಶಿರೂರ ಗ್ರಾಮದ ರೈತ ಅರುಣಾ ಕಟ್ಟಿಮನಿ ಅವರ ಮೆಣಸಿನಕಾಯಿ ಬೆಳೆಗಳನ್ನು ಪರಿಶೀಲಿಸಿ ರೈತರ ಅಹವಾಲು ಆಲಿಸಿದರು.
ಮಳೆಯ ಅಭಾವದಿಂದ ಉಂಟಾಗಿರುವ ಬೆಳೆ ನಷ್ಟದ ಕುರಿತು ರೈತರಿಂದ ಮಾಹಿತಿ ಪಡೆದ ಸಚಿವರು, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಮಳೆ ಕೊರತೆಯ ಸಂದರ್ಭದಲ್ಲಿ ರೈತರಿಗೆ ಬೆಳೆ ನಿರ್ವಹಣೆ, ಪರ್ಯಾಯ ಬೆಳೆ ಆಯ್ಕೆ ಹಾಗೂ ನಷ್ಟ ತಗ್ಗಿಸುವ ಕುರಿತು ತಾಂತ್ರಿಕ ಮಾರ್ಗದರ್ಶನ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಬೆಳೆ ವಿಮೆ ಯೋಜನೆಯಡಿ ನೋಂದಾಯಿತ ರೈತರ ಮಾಹಿತಿ ಪಡೆದು, ಅರ್ಹ ರೈತರಿಗೆ ವಿಮೆ ಸೌಲಭ್ಯ ಸಮರ್ಪಕವಾಗಿ ತಲುಪುವಂತೆ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.

ಜಂಟಿ ಕೃಷಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ ಹಾಗೂ ತೋಟಗಾರಿಕೆ ಜಂಟಿ ನಿರ್ದೇಶಕ ರವೀಂದ್ರ ಹಕಾಟಿ ಅವರು ಜಿಲ್ಲೆಯ ಕೃಷಿ ಪರಿಸ್ಥಿತಿ, ಮಳೆಯ ಕೊರತೆ ಹಾಗೂ ಬೆಳೆ ಹಾನಿಯ ಕುರಿತು ಸಚಿವರಿಗೆ ವಿವರಿಸಿದರು. ಮಳೆಯ ಕೊರತೆಯಿಂದ ಹಾನಿಗೊಳಗಾದ ಬೆಳೆಗಳ ಕುರಿತು ಸಮಗ್ರ ಸಮೀಕ್ಷೆ ನಡೆಸಿ, ಎರಡು ದಿನಗಳೊಳಗೆ ವಿಸ್ತೃತ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಬುದಿನಗಡ ಗ್ರಾಮದಲ್ಲಿ ನಡೆದ ಪರಿವೀಕ್ಷಣೆ ವೇಳೆ ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಹಾಗೂ ಬಾಗಲಕೋಟೆ ಶಾಸಕ ಉಮೇಶ್ ಮೇಟಿ ಉಪಸ್ಥಿತರಿದ್ದು, ರೈತರಿಗೆ ಉಂಟಾಗಿರುವ ಸಂಕಷ್ಟದ ಬಗ್ಗೆ ಸಚಿವರ ಗಮನ ಸೆಳೆದರು. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಮಳೆಯ ಕೊರತೆಯಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಬೆಳೆ ವಿಮೆ ಸೇರಿದಂತೆ ಸೂಕ್ತ ಪರಿಹಾರವನ್ನು ಸರ್ಕಾರ ಒದಗಿಸಬೇಕೆಂದು ಮನವಿ ಮಾಡಿದರು.

ಪರಿವೀಕ್ಷಣೆ ವೇಳೆ ಜಿಲ್ಲಾಧಿಕಾರಿ ಸಂಗಪ್ಪ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಜಾನನ ಬಾಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬಾಗಲಕೋಟೆ ಕುರುಬರ ಸಂಘದ ಜಿಲ್ಲಾ ಅಧ್ಯಕ್ಷ ಸ್ಥಾನದಿಂದ ಡಿ.ಬಿ. ಸಿದ್ದಾಪುರರನ್ನು ವಿಮುಕ್ತಿಗೊಳಿಸಿ ಆದೇಶ

ಬಾಗಲಕೋಟೆಯಲ್ಲಿ ವಿಜಯೇಂದ್ರ ಸಮ್ಮುಖದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬಿಜೆಪಿ ಸೇರ್ಪಡೆ

ಬಾಗಲಕೋಟೆ ಉಪಚುನಾವಣೆ: ಸಿಎಂ ಸಿದ್ದರಾಮಯ್ಯ ಭೇಟಿ – ಮಲ್ಲಿಕಾರ್ಜುನ ಚರಂತಿಮಠ ಮನೆಗೆ ಆಗಮನ ರಾಜಕೀಯ ಚರ್ಚೆಗೆ ಕಾರಣ