ನಿಕೋಟಿನ್ ನಿಷೇಧ ಮುಂದುವರಿಕೆ: ಅಡಿಕೆ ಬೆಳೆಗಾರರಿಗೆ ಯಾವುದೇ ತೊಂದರೆ ಇಲ್ಲ ಎಂದ ಖಾದರ್
ಬೆಂಗಳೂರು: ನಿಕೋಟಿನ್ ಹಾಗೂ ತಂಬಾಕು ಹೊಂದಿರುವ ಗುಟ್ಕಾ, ಪಾನ್ ಮಸಾಲ ಉತ್ಪನ್ನಗಳ ಮೇಲಿನ ನಿಷೇಧವನ್ನು ಸರ್ಕಾರ ಹಿಂಪಡೆದಿಲ್ಲ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಸ್ಪಷ್ಟಪಡಿಸಿದ್ದಾರೆ. ಈ ನಿರ್ಧಾರದಿಂದ ಅಡಿಕೆ ಬೆಳೆಗಾರರು ಆತಂಕಪಡುವ ಅಗತ್ಯವಿಲ್ಲ ಎಂದೂ ಅವರು ತಿಳಿಸಿದ್ದಾರೆ.
ಜನರ ಆರೋಗ್ಯದ ಹಿತದೃಷ್ಟಿಯಿಂದ ಪಾನ್ ಮಸಾಲದಲ್ಲಿ ನಿಕೋಟಿನ್ ಇರಬಾರದು ಎಂಬ ನಿಯಮ ಜಾರಿಗೊಳಿಸಲಾಗಿದೆ. ಇದರಿಂದ ಅಡಿಕೆ ಬೆಳೆಗಾರರು, ರೈತರು ಅಥವಾ ಅಡಿಕೆ ವ್ಯಾಪಾರಿಗಳಿಗೆ ಯಾವುದೇ ನೇರ ತೊಂದರೆಯಾಗುವುದಿಲ್ಲ. ಸರ್ಕಾರವು ಅಡಿಕೆ ಕ್ಷೇತ್ರಕ್ಕೆ ಅಗತ್ಯ ಬೆಂಬಲ ಹಾಗೂ ಪ್ರೋತ್ಸಾಹ ನೀಡಲಿದೆ ಎಂದು ಖಾದರ್ ಹೇಳಿದರು.
ಅಡಿಕೆ ಬೆಳೆಗಾರರಿಗೆ ತೊಂದರೆ ಉಂಟುಮಾಡುವ ಯಾವುದೇ ಕ್ರಮವನ್ನು ಸರ್ಕಾರ ಕೈಗೊಳ್ಳುವುದಿಲ್ಲ. ನಿಷೇಧದಿಂದ ಅಡಿಕೆ ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆಯೇ ಹೆಚ್ಚು. ಗುಟ್ಕಾ ತಯಾರಿಕೆಗೆ ದೇಶೀಯ ಅಡಿಕೆಗಿಂತ ನೇಪಾಳ ಹಾಗೂ ಬಾಂಗ್ಲಾದೇಶದಿಂದ ಆಮದಾಗುವ ಅಡಿಕೆಯನ್ನು ಬಳಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಈ ಹಿಂದೆ ಗುಟ್ಕಾ ನಿಷೇಧ ಜಾರಿಗೊಳಿಸಿದ ಸಂದರ್ಭದಲ್ಲಿಯೂ ಅಡಿಕೆ ಬೆಲೆ ಕುಸಿಯಲಿದೆ ಎಂಬ ಆತಂಕ ವ್ಯಕ್ತವಾಗಿತ್ತು. ಆದರೆ ನಂತರ ಅಡಿಕೆ ಬೆಲೆಯಲ್ಲಿ ಏರಿಕೆ ಕಂಡುಬಂದಿತ್ತು. ಇದೇ ರೀತಿಯಾಗಿ ಈಗಿನ ನಿರ್ಧಾರದಿಂದಲೂ ಬೆಳೆಗಾರರಿಗೆ ಸಮಸ್ಯೆಯಾಗುವುದಿಲ್ಲ. ಮುಂದಿನ ಮೂರು ತಿಂಗಳ ಬೆಳವಣಿಗೆಯನ್ನು ಗಮನಿಸಿದರೆ ಪರಿಸ್ಥಿತಿ ಸ್ಪಷ್ಟವಾಗಲಿದೆ ಎಂದು ಹೇಳಿದರು.
ನಿಷೇಧದ ವಿಚಾರವಾಗಿ ಮುಖ್ಯಮಂತ್ರಿ ಅವರೊಂದಿಗೆ ಚರ್ಚೆ ನಡೆದಿದ್ದು, ಆರೋಗ್ಯದ ದೃಷ್ಟಿಯಿಂದ ಸರ್ಕಾರದ ನಿರ್ಧಾರ ಸರಿಯಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಅಡಿಕೆ ಬೆಳೆಗಾರರಿಗೆ ಯಾವುದೇ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂಬ ಸೂಚನೆಯನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ. ಹೀಗಾಗಿ ರೈತರು ಹಾಗೂ ಅಡಿಕೆ ವ್ಯಾಪಾರಿಗಳು ಆತಂಕಪಡುವ ಅಗತ್ಯವಿಲ್ಲ ಎಂದು ಯು.ಟಿ. ಖಾದರ್ ಸ್ಪಷ್ಟಪಡಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ