ಕಾಲಾತೀತ ವೈಚಾರಿಕ ದರ್ಶನ: ವಚನ ಸಾಹಿತ್ಯ

ಬಾಗಲಕೋಟೆ: ವಚನ ಸಾಹಿತ್ಯವು ಕೇವಲ ಧಾರ್ಮಿಕ ಚೌಕಟ್ಟಿಗೆ ಅಥವಾ ದೇವತಾ ಸ್ತುತಿಗೆ ಸೀಮಿತವಾಗಿರದೆ, ಬದುಕಿನ ಸರ್ವತೋಮುಖ ದರ್ಶನ, ವೈಜ್ಞಾನಿಕ ಚಿಂತನೆ ಹಾಗೂ ಸಾಮಾಜಿಕ ಮೌಲ್ಯಗಳಿಗೆ ಇಂದಿಗೂ ದಾರಿದೀಪವಾಗಿದೆ ಎಂದು ಭೋವಿ ಗುರುಪೀಠದ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.
ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ ಹಾಗೂ ಶ್ರೀ ಶರಣಬಸವಾಶ್ರಮದ ವತಿಯಿಂದ ಹಮ್ಮಿಕೊಂಡಿದ್ದ ಪಲ್ಲಕ್ಕಿ ಉತ್ಸವದ ದಿವ್ಯ ನೇತೃತ್ವ ವಹಿಸಿ ಅವರು ಮಾತನಾಡಿದರು.

12ನೇ ಶತಮಾನದ ಶರಣರು ಕಟ್ಟಿಕೊಟ್ಟ ವಚನ ಪರಂಪರೆಯು ಮಾನವ ಜೀವನದ ಪ್ರತಿಯೊಂದು ಆಯಾಮವನ್ನೂ ವೈಜ್ಞಾನಿಕ ಹಾಗೂ ಸಾಮಾಜಿಕ ನೆಲೆಯಲ್ಲಿ ಸ್ಪರ್ಶಿಸುವ ಅದ್ಭುತ ಜೀವನ ದರ್ಶನವಾಗಿದೆ. ಭೌತಿಕ ಪ್ರಪಂಚದ ನಿಗೂಢ ರಹಸ್ಯಗಳಿಂದ ವ್ಯಕ್ತಿಯ ಅಂತರಂಗದ ಶಾಂತಿಯವರೆಗೆ, ಸಾಮಾಜಿಕ ಸೌಹಾರ್ದತೆಯಿಂದ ವೈಜ್ಞಾನಿಕ ಚಿಂತನೆಯವರೆಗೆ ವಚನಗಳ ಬೋಧನೆಗಳು ಬೆಳಕು ಚೆಲ್ಲುತ್ತವೆ ಎಂದು ತಿಳಿಸಿದರು.

ಶರಣರು ಮೂಢನಂಬಿಕೆ, ಕಂದಾಚಾರಗಳನ್ನು ಸ್ಪಷ್ಟವಾಗಿ ವಿರೋಧಿಸಿದ್ದರು. ನಿಸರ್ಗದ ನಿಯಮ, ಪರಿಸರ ಸಮತೋಲನ ಹಾಗೂ ಶರೀರ ವಿಜ್ಞಾನದ ಕುರಿತು ವೈಜ್ಞಾನಿಕ ಒಳನೋಟ ಮತ್ತು ವೈಚಾರಿಕ ಚಿಂತನೆ ವಚನಗಳಲ್ಲಿ ಕಾಣಸಿಗುತ್ತದೆ. ಜಾತಿ, ಲಿಂಗ ಹಾಗೂ ವರ್ಗ ಭೇದವಿಲ್ಲದ ಸಮಾನತೆಯ ಸಮಾಜ ನಿರ್ಮಾಣಕ್ಕೆ ವಚನಕಾರರು ಯುಗಪ್ರವರ್ತಕರಾಗಿ ತಳಹದಿ ಹಾಕಿದ್ದಾರೆ ಎಂದರು.

ವಚನಗಳು ಕೇವಲ ಭೂತಕಾಲದ ನೆನಪುಗಳಲ್ಲ. ಅವು ವರ್ತಮಾನದ ಅಗತ್ಯವೂ, ಭವಿಷ್ಯದ ಆಶಾಕಿರಣವೂ ಆಗಿವೆ. ಸಮಾಜದ ಒಗ್ಗಟ್ಟು, ವೈಜ್ಞಾನಿಕ ಮನೋಭಾವ ಹಾಗೂ ಮಾನವೀಯ ಮೌಲ್ಯಗಳನ್ನು ಗಟ್ಟಿಗೊಳಿಸಲು ವಚನಗಳ ಅಧ್ಯಯನ ಮತ್ತು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಸ್ವಾಮೀಜಿ ಹೇಳಿದರು.

ಕುಂಬಾರ ಗುರುಪೀಠದ ಬಸವ ಗುಂಡಯ್ಯ ಶ್ರೀಗಳು, ಹಡಪದ ಗುರುಪೀಠದ ಅನ್ನದಾನಿ ಭಾರತೀ ಅಪ್ಪಣ್ಣ ಶ್ರೀಗಳು, ಭೋವಿ ಗುರುಪೀಠದ ಶ್ರೀಕಾಂತ ದೇವರು ಹಾಗೂ ಅಮರೇಶ್ವರ ಶಾಸ್ತ್ರೀಗಳ ಸಮ್ಮುಖದಲ್ಲಿ ಪಲ್ಲಕ್ಕಿ ಉತ್ಸವ ಜರುಗಿತು.

ಶ್ರೀ ಶರಣಬಸವಾಶ್ರಮದಿಂದ ಆರಂಭಗೊಂಡ ಪಲ್ಲಕ್ಕಿ ಉತ್ಸವವು ಜಾನಪದ ಕಲಾತಂಡಗಳು ಹಾಗೂ ಪೂರ್ಣಕುಂಭ ಕಳಸಗಳೊಂದಿಗೆ ಕಾರೇಹಳ್ಳ, ವಿವೇಕಾನಂದ ನಗರ ಹಾಗೂ ಲೋಕೋಪಯೋಗಿ ವಸತಿನಿಲಯದ ಮೂಲಕ ಸಂಚರಿಸಿತು. ಶ್ರೀಪೀಠದ ಧರ್ಮದರ್ಶಿಗಳು, ಅಕ್ಕನ ಬಳಗದವರು ಹಾಗೂ ಗುರುಕುಲದ ವಿದ್ಯಾರ್ಥಿಗಳು ಜಾಥಾದಲ್ಲಿ ಭಾಗವಹಿಸಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬಾಗಲಕೋಟೆ ಕುರುಬರ ಸಂಘದ ಜಿಲ್ಲಾ ಅಧ್ಯಕ್ಷ ಸ್ಥಾನದಿಂದ ಡಿ.ಬಿ. ಸಿದ್ದಾಪುರರನ್ನು ವಿಮುಕ್ತಿಗೊಳಿಸಿ ಆದೇಶ

ಬಾಗಲಕೋಟೆಯಲ್ಲಿ ವಿಜಯೇಂದ್ರ ಸಮ್ಮುಖದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬಿಜೆಪಿ ಸೇರ್ಪಡೆ

ಬಾಗಲಕೋಟೆ ಉಪಚುನಾವಣೆ: ಸಿಎಂ ಸಿದ್ದರಾಮಯ್ಯ ಭೇಟಿ – ಮಲ್ಲಿಕಾರ್ಜುನ ಚರಂತಿಮಠ ಮನೆಗೆ ಆಗಮನ ರಾಜಕೀಯ ಚರ್ಚೆಗೆ ಕಾರಣ