ಬಿಪಿಎಲ್ ಕಾರ್ಡ್ ರದ್ದತಿ ಸದ್ಯಕ್ಕೆ ತಡೆ: ಸಚಿವ ರಿಜ್ವಾನ್ ಅರ್ಷದ್
ಉಡುಪಿ: ಕೇಂದ್ರ ಸರ್ಕಾರದ ಸೂಚನೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಡೆಯುತ್ತಿದ್ದ ಬಿಪಿಎಲ್ ಪಡಿತರ ಚೀಟಿಗಳ ರದ್ದತಿ ಪ್ರಕ್ರಿಯೆಯನ್ನು ಸದ್ಯಕ್ಕೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಆಹಾರ ಸಚಿವ ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ.
ಉಡುಪಿಯಲ್ಲಿ ಶನಿವಾರ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿರುವ 7.59 ಲಕ್ಷ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸುವಂತೆ ಕೇಂದ್ರ ಸರ್ಕಾರದಿಂದ ಸೂಚನೆ ಬಂದಿತ್ತು. ಅದರಂತೆ ಈಗಾಗಲೇ ಸುಮಾರು 4 ಲಕ್ಷ ಕಾರ್ಡ್‌ಗಳನ್ನು ರದ್ದುಪಡಿಸಲಾಗಿದೆ. ಆದರೆ, ಅರ್ಹ ಫಲಾನುಭವಿಗಳ ಬಗ್ಗೆ ಸಮಗ್ರ ಪರಿಶೀಲನೆ ನಡೆಸುವ ಉದ್ದೇಶದಿಂದ ಉಳಿದ ಕಾರ್ಡ್‌ಗಳ ರದ್ದತಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ಹೇಳಿದರು.
ಸುಮಾರು 3.5 ಲಕ್ಷ ಕಾರ್ಡ್‌ಗಳ ಕುರಿತು ಪರಿಶೀಲನೆ
ಉಳಿದಿರುವ ಅಂದಾಜು 3.5 ಲಕ್ಷ ಬಿಪಿಎಲ್ ಕಾರ್ಡ್‌ಗಳ ರದ್ದತಿ ಸದ್ಯಕ್ಕೆ ಸ್ಥಗಿತಗೊಂಡಿದೆ. ಈ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಿ ಮುಂದಿನ ಕ್ರಮದ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಪಡಿತರ ಚೀಟಿದಾರರಿಗೆ ಮತ್ತೆ ಇ-ಕೆವೈಸಿ
ಪಡಿತರ ಚೀಟಿಗಳಿಗೆ ಈ ಹಿಂದೆ ಇ-ಕೆವೈಸಿ ಮಾಡಿಸಿ ಸುಮಾರು ಐದು ವರ್ಷಗಳು ಕಳೆದಿವೆ. ಇದೀಗ ಮತ್ತೆ ಕೆವೈಸಿ ಪೂರ್ಣಗೊಳಿಸುವಂತೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ. ರಾಜ್ಯದಲ್ಲಿ ಸುಮಾರು 2.59 ಕೋಟಿ ಪಡಿತರ ಚೀಟಿಗಳಿಗೆ ಮರು ಕೆವೈಸಿ ಮಾಡಬೇಕಾಗಿದೆ ಎಂದು ಹೇಳಿದರು.
ಕಾರ್ಡ್‌ದಾರರು ಮೃತಪಟ್ಟಿರುವುದು, ಕುಟುಂಬದ ಆರ್ಥಿಕ ಸ್ಥಿತಿಯಲ್ಲಿ ಬದಲಾವಣೆಯಾಗಿರುವುದು ಅಥವಾ ಬಿಪಿಎಲ್ ಸೌಲಭ್ಯದ ಅಗತ್ಯವಿಲ್ಲದಿರುವಂತಹ ಮಾಹಿತಿಗಳು ಕೆವೈಸಿ ಮೂಲಕ ದೃಢಪಡಲಿವೆ. ಆದ್ದರಿಂದ ಅರ್ಹ ಫಲಾನುಭವಿಗಳು ನಿಗದಿತ ಅವಧಿಯೊಳಗೆ ಕೆವೈಸಿ ಪೂರ್ಣಗೊಳಿಸಿಕೊಳ್ಳಬೇಕು ಎಂದು ಸಚಿವರು ಮನವಿ ಮಾಡಿದರು.
ಹೊಸ ಬಿಪಿಎಲ್ ಕಾರ್ಡ್‌ಗಳ ಬಗ್ಗೆ ಬಳಿಕ ನಿರ್ಧಾರ
ಹೊಸ ಬಿಪಿಎಲ್ ಕಾರ್ಡ್‌ಗಳನ್ನು ವಿತರಿಸುವ ವಿಚಾರವನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು. ತಾವು ಇತ್ತೀಚೆಗಷ್ಟೇ ಇಲಾಖೆಯ ಜವಾಬ್ದಾರಿ ವಹಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಈ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ರಿಜ್ವಾನ್ ಅರ್ಷದ್ ಹೇಳಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ