ನಾರಾಯಣಗುರುಗಳ ಆದರ್ಶ ಯುವಜನತೆಗೆ ದಾರಿದೀಪ: ಉಮೇಶ ಮೇಟಿ

ಬಾಗಲಕೋಟೆ, ಆ.28: ಜಾತಿ, ಧರ್ಮ ಹಾಗೂ ಸಾಮಾಜಿಕ ಭೇದಗಳನ್ನು ಮೀರಿ ಸಮಾನತೆ ಮತ್ತು ಸಹೋದರತ್ವದ ಬದುಕಿಗೆ ದಾರಿ ತೋರಿಸಿದ ಮಹಾನ್ ಸಮಾಜ ಸುಧಾರಕ ಬ್ರಹ್ಮಶ್ರೀ ನಾರಾಯಣಗುರು ಎಂದು ಶಾಸಕ ಉಮೇಶ ಮೇಟಿ ಹೇಳಿದರು.

ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಾರಾಯಣಗುರುಗಳು ಸಮಾಜದಲ್ಲಿ ಶಿಕ್ಷಣ, ಸಮಾನತೆ ಹಾಗೂ ಸಾಮಾಜಿಕ ಜಾಗೃತಿಗೆ ಹೆಚ್ಚಿನ ಒತ್ತು ನೀಡಿದ್ದರು. ‘ಒಂದೇ ಜಾತಿ, ಒಂದೇ ಮತ, ಒಂದೇ ದೇವರು’ ಎಂಬ ಅವರ ತತ್ವವು ಇಂದಿಗೂ ಸಮಾಜಕ್ಕೆ ಪ್ರಸ್ತುತವಾಗಿದೆ. ಶಿಕ್ಷಣವೇ ಸಾಮಾಜಿಕ ಬದಲಾವಣೆಯ ಪ್ರಮುಖ ಸಾಧನವೆಂದು ಸಾರಿದ ಅವರ ಚಿಂತನೆಗಳನ್ನು ಯುವ ಪೀಳಿಗೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಶಿಕ್ಷಣಕ್ಕೆ ಆದ್ಯತೆ ಅಗತ್ಯ

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷ ಅನೀಲಕುಮಾರ ದಡ್ಡಿ ಮಾತನಾಡಿ, ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಣದ ಪಾತ್ರ ಮಹತ್ವದ್ದಾಗಿದೆ. ವಿದ್ಯಾರ್ಥಿಗಳು ಪರಿಶ್ರಮ, ಶಿಸ್ತು ಹಾಗೂ ಉತ್ತಮ ಮೌಲ್ಯಗಳನ್ನು ಬೆಳೆಸಿಕೊಂಡು ತಮ್ಮ ಪ್ರತಿಭೆಯನ್ನು ಸಮಾಜದ ಅಭಿವೃದ್ಧಿಗೆ ಬಳಸಿಕೊಳ್ಳಬೇಕು ಎಂದರು.ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಸಮಾಜದ ಕರ್ತವ್ಯವಾಗಿದೆ. ಪ್ರತಿಭಾವಂತರಿಗೆ ನೀಡುವ ಗೌರವವು ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವುದರ ಜತೆಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡಲು ಪ್ರೇರಣೆ ನೀಡುತ್ತದೆ ಎಂದು ಹೇಳಿದರು.
       ನಿವೃತ್ತ ಉಪನ್ಯಾಸಕ ಮಹಾಂತೇಶ ಈಳಗೇರ ಅವರು ನಾರಾಯಣಗುರುಗಳ ಜೀವನ ಮತ್ತು ಸಮಾಜ ಸುಧಾರಣೆಯ ಕಾರ್ಯಗಳ ಕುರಿತು ಉಪನ್ಯಾಸ ನೀಡಿದರು.ಜಯಂತಿ ಅಂಗವಾಗಿ ಶೈಕ್ಷಣಿಕ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
     ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸಂಗಪ್ಪ, ಸಮುದಾಯದ ಮುಖಂಡರಾದ ಆನಂದ ಈಳಗೇರ, ಮುತ್ತರಾಜ ಕರಡಿ, ಮಹಾದೇವ ಹಾದಿಮನಿ ಅನಿಲಕುಮಾರ ದಡ್ಡಿ, ರಜಕ್ ಬೇಲೂರು  ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬಾಗಲಕೋಟೆ ಕುರುಬರ ಸಂಘದ ಜಿಲ್ಲಾ ಅಧ್ಯಕ್ಷ ಸ್ಥಾನದಿಂದ ಡಿ.ಬಿ. ಸಿದ್ದಾಪುರರನ್ನು ವಿಮುಕ್ತಿಗೊಳಿಸಿ ಆದೇಶ

ಬಾಗಲಕೋಟೆಯಲ್ಲಿ ವಿಜಯೇಂದ್ರ ಸಮ್ಮುಖದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬಿಜೆಪಿ ಸೇರ್ಪಡೆ

ಬಾಗಲಕೋಟೆ ಉಪಚುನಾವಣೆ: ಸಿಎಂ ಸಿದ್ದರಾಮಯ್ಯ ಭೇಟಿ – ಮಲ್ಲಿಕಾರ್ಜುನ ಚರಂತಿಮಠ ಮನೆಗೆ ಆಗಮನ ರಾಜಕೀಯ ಚರ್ಚೆಗೆ ಕಾರಣ