ಮೇಟಿಯವರ ಕನಸಿನ ಯೋಜನೆ ನನಸು: 100 ವೈದ್ಯಕೀಯ ಸೀಟುಗಳ ಮಂಜೂರಾತಿಗೆ ವಿಜಯೋತ್ಸವ
ಬಾಗಲಕೋಟೆ: ಬಾಗಲಕೋಟೆ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯಕ್ಕೆ 100 ವೈದ್ಯಕೀಯ ಸೀಟುಗಳೊಂದಿಗೆ ಪ್ರವೇಶ ಆರಂಭಿಸಲು ಮೆಡಿಕಲ್ ಕೌನ್ಸಿಲ್‌ನಿಂದ ಅನುಮತಿ ದೊರೆತ ಹಿನ್ನೆಲೆಯಲ್ಲಿ, ದಿವಂಗತ ಶಾಸಕ ಎಚ್.ವೈ. ಮೇಟಿಯವರ ಕನಸು ನನಸಾದ ಸಂಭ್ರಮದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಶನಿವಾರ ಬಸವೇಶ್ವರ ವೃತ್ತದಲ್ಲಿ ವಿಜಯೋತ್ಸವ ಆಚರಿಸಿದರು.
ವಿಜಯೋತ್ಸವದಲ್ಲಿ ಶಾಸಕ ಉಮೇಶ ಹುಲ್ಲಪ್ಪ ಮೇಟಿ ಮಾತನಾಡಿ, ಬಾಗಲಕೋಟೆಗೆ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಬೇಕೆಂಬುದು ನಮ್ಮ ತಂದೆ ದಿವಂಗತ ಎಚ್.ವೈ. ಮೇಟಿಯವರ ಬಹುದಿನಗಳ ಕನಸಾಗಿತ್ತು. ಇಂದು ಆ ಕನಸು ನನಸಾಗಿರುವುದು ನಮ್ಮ ಕುಟುಂಬಕ್ಕೆ ಮಾತ್ರವಲ್ಲದೆ ಇಡೀ ಜಿಲ್ಲೆಯ ಜನತೆಗೆ ಹೆಮ್ಮೆಯ ವಿಷಯವಾಗಿದೆ ಎಂದರು.
100 ವೈದ್ಯಕೀಯ ಸೀಟುಗಳೊಂದಿಗೆ ಪ್ರವೇಶ ಪ್ರಕ್ರಿಯೆ ಆರಂಭವಾಗುತ್ತಿರುವುದರಿಂದ ಜಿಲ್ಲೆಯ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಪಡೆಯಲು ಹೊಸ ಅವಕಾಶ ದೊರೆತಿದೆ. ಮುಂದಿನ ದಿನಗಳಲ್ಲಿ ಮಹಾವಿದ್ಯಾಲಯ ಇನ್ನಷ್ಟು ಅಭಿವೃದ್ಧಿ ಹೊಂದಿ, ಜಿಲ್ಲೆಯ ಜನರಿಗೆ ಅತ್ಯುತ್ತಮ ವೈದ್ಯಕೀಯ ಸೇವೆ ದೊರೆಯುವಂತಾಗಬೇಕು ಎಂದು ಆಶಿಸಿದರು.
ಈ ಮಹತ್ವದ ಸಾಧನೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ, ಮಾಜಿ ಸಚಿವ ಆರ್.ಬಿ. ತಿಮ್ಮಾಪುರ, ಸಂಸದ ಪಿ.ಸಿ. ಗದ್ದಿಗೌಡರ, ಬಸವರಾಜ ಹಿಟ್ನಾಳ, ಪ್ರಿಯಾಂಕಾ ಜಾರಕಿಹೊಳಿ ಸೇರಿದಂತೆ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು.
ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ನಾಗರಾಜ ಹದ್ಲಿ ಮಾತನಾಡಿ, ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯಕ್ಕೆ ದಿವಂಗತ ಶಾಸಕ ಎಚ್.ವೈ. ಮೇಟಿಯವರ ಹೆಸರಿಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ದ್ಯಾಮಣ್ಣ ಗಾಳಿ, ಬುಡಾ ಅಧ್ಯಕ್ಷ ಅಬ್ದುಲ್‌ರಜಾಕ್ ಬೇಣೂರ, ಹನುಮಂತ ರಾಕುಂಪಿ, ಸಂಗಣ್ಣ ಹಂಡಿ, ಶ್ರೀಧರ ನೀಲನಾಯಕ, ಅಯೂಬ್ ಪುಣೇಕರ, ಮುಮತಾಜ್ ಸುತಾರ, ರೇಣುಕಾ ನಾರಾಯಣಕರ, ಶಿವಕುಮಾರ ನಂದಿಕೋಲಮಠ, ರೇಣುಕಾ ನ್ಯಾಮಗೌಡ, ಶಂಕರ ನಾಯಕ, ವಿಜಯ ಮುಳ್ಳೂರ, ಸುನೀಲ ಬಾಲಗಾವಿ, ವಿಲಾಸ ಮೆಣಸಗಿ ಸೇರಿದಂತೆ ಕಾಂಗ್ರೆಸ್ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಬಾಗಲಕೋಟೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಆಗಲೇಬೇಕೆಂಬುದು ಶಾಸಕರಾಗಿದ್ದ ದಿ.ಎಚ್.ವೈ. ಮೇಟಿಯವರ ಕನಸಾಗಿತ್ತು. ಇದಕ್ಕಾಗಿ ಅವರು ಸಾಕಷ್ಟು ಪರಿಶ್ರಮಪಟ್ಟಿದ್ದಾರೆ. ಸಿಎಂ ಡಿಕೆಶಿ, ಮಾಜಿ ಸಿಎಂ ಸಿದ್ದರಾಮಯ್ಯ, ವೈದ್ಯಕೀಯ ಶಿಕ್ಷಣ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಬಾಗಲಕೋಟೆ, ಕೊಪ್ಪಳ ಹಾಗು ಚಿಕ್ಕೋಡಿ ಸಂಸದರ ಸಹಕಾರದೊಂದಿಗೆ ವೈದ್ಯಕೀಯ ಕಾಲೇಜಿಗೆ ಅನುಮತಿ ಸಿಕ್ಕಿದೆ. ಆ ಮೂಲಕ ದಿ.ಮೇಟಿಯವರ ಕನಸು ಈಡೇರಿದೆ. ಸಹೋದರ ಶಾಸಕ ಉಮೇಶ ಎಚ್. ಮೇಟಿಯವರೂ, ಉಪ ಚುನಾವಣೆ ಬಳಿಕ ನಿರಂತರ ಪ್ರಯತ್ನ ಮಾಡಿದ್ದಾರೆ. ಒಟ್ಟಾರೆ, ಬಾಗಲಕೋಟೆಯ ಬಹು ವರ್ಷಗಳ ಬೇಡಿಕೆ ಈಡೇರಿದ್ದು, ಜಿಲ್ಲೆಗೆ ದಿ.ಮೇಟಿಯವರು ನೀಡಿದ ದೊಡ್ಡ ಕೊಡುಗೆ.
-ಹೊಳಬಸು ಶೆಟ್ಟರ, ಯುವ ಮುಖಂಡರು, ಕಾಂಗ್ರೆಸ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ