ಬಿಟಿಡಿಎಗೆ ₹335 ಕೋಟಿ ಅನುದಾನ: ಸಚಿವರ ಭರವಸೆ
ಬೆಂಗಳೂರು : ನವನಗರದ ಸಮಗ್ರ ಅಭಿವೃದ್ಧಿ ಹಾಗೂ ಹಳೆಯ ಮೂಲಸೌಕರ್ಯಗಳ ದುರಸ್ತಿಗೆ ಕೃಷ್ಣಾ ಭಾಗ್ಯ ಜಲ ನಿಗಮದ (ಕೆಬಿಜೆಎನ್‌ಎಲ್) ವಾರ್ಷಿಕ ಅನುದಾನದಲ್ಲಿ ₹335 ಕೋಟಿ ಬಿಡುಗಡೆ ಮಾಡುವುದಾಗಿ ಜಲ ಸಂಪನ್ಮೂಲ ಸಚಿವ ಚಲುವರಾಯಸ್ವಾಮಿ ಭರವಸೆ ನೀಡಿದರು.
ಬಾಗಲಕೋಟೆ ಶಾಸಕ ಉಮೇಶ ಎಚ್. ಮೇಟಿ ಅವರು ಬುಧವಾರ ಸಚಿವರನ್ನು ಭೇಟಿ ಮಾಡಿ ನವನಗರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿದರು. ಮನವಿಗೆ ಸ್ಪಂದಿಸಿದ ಸಚಿವರು, ಅಗತ್ಯ ಅನುದಾನವನ್ನು ಶೀಘ್ರ ಬಿಡುಗಡೆ ಮಾಡುವಂತೆ ಕೆಬಿಜೆಎನ್‌ಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ನಿರ್ದೇಶನ ನೀಡಿದರು.
*25 ವರ್ಷಗಳ ಹಿಂದಿನ ಮೂಲಸೌಕರ್ಯ*
ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಮುಳುಗಡೆಯಾದ ಬಾಗಲಕೋಟೆ ನಗರದ ಸಂತ್ರಸ್ತರಿಗೆ ನವನಗರದ ಯೂನಿಟ್–1, 2 ಮತ್ತು 3ರಲ್ಲಿ ಹಂತ ಹಂತವಾಗಿ ಪುನರ್ವಸತಿ ಕಲ್ಪಿಸಲಾಗಿದೆ. ಯೂನಿಟ್–1ರಲ್ಲಿ ಸುಮಾರು 25 ವರ್ಷಗಳ ಹಿಂದೆ ರಸ್ತೆ, ಶಾಲಾ ಕಟ್ಟಡ, ಚರಂಡಿ, ಒಳಚರಂಡಿ, ಉದ್ಯಾನವನ ಹಾಗೂ ಸಮುದಾಯ ಭವನ ಸೇರಿದಂತೆ ವಿವಿಧ ಮೂಲಸೌಕರ್ಯಗಳನ್ನು ನಿರ್ಮಿಸಲಾಗಿದೆ.
ಈ ಮೂಲಸೌಕರ್ಯಗಳು ಹಳೆಯದಾಗಿರುವುದರಿಂದ ಸಮಗ್ರ ದುರಸ್ತಿ ಹಾಗೂ ನವೀಕರಣದ ಅಗತ್ಯವಿದೆ ಎಂದು ಶಾಸಕ ಉಮೇಶ ಎಚ್. ಮೇಟಿ ಸಚಿವರಿಗೆ ಮನವರಿಕೆ ಮಾಡಿದರು.
ನವನಗರದಲ್ಲಿ 375.36 ಕಿ.ಮೀ. ರಸ್ತೆಬದಿ ಚರಂಡಿ ಜಾಲವಿದ್ದು, ಇದರ ದುರಸ್ತಿಗೆ ₹120 ಕೋಟಿ, ಒಳಚರಂಡಿ ಜಾಲದ ದುರಸ್ತಿಗೆ ₹70 ಕೋಟಿ, ರಸ್ತೆ ದುರಸ್ತಿಗೆ ₹120 ಕೋಟಿ ಹಾಗೂ ಶಾಲಾ ಕಟ್ಟಡಗಳು, ಸಮುದಾಯ ಭವನಗಳು ಮತ್ತು ಉದ್ಯಾನವನಗಳ ದುರಸ್ತಿಗೆ ₹25 ಕೋಟಿ ಸೇರಿದಂತೆ ಒಟ್ಟು ₹335 ಕೋಟಿ ಅನುದಾನ ಒದಗಿಸುವಂತೆ ಮನವಿ ಮಾಡಿದರು.
ಮನವಿಗೆ ಸ್ಪಂದಿಸಿದ ಸಚಿವ ಚಲುವರಾಯಸ್ವಾಮಿ, ಕೆಬಿಜೆಎನ್‌ಎಲ್‌ಗೆ ವಾರ್ಷಿಕವಾಗಿ ಹಂಚಿಕೆಯಾಗಿರುವ ಅನುದಾನದಲ್ಲಿ ಅಗತ್ಯ ಮೊತ್ತವನ್ನು ಕೂಡಲೇ ಬಿಡುಗಡೆ ಮಾಡುವಂತೆ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದ್ದಾರೆ.
ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ನಾಗರಾಜ ಹದ್ಲಿ, ಮುಖಂಡರಾದ ಹೊಳಬಸು ಶೆಟ್ಟರ, ಭರತ ಈಟಿ, ದ್ಯಾಮಣ್ಣ ಗಾಳಿ, ಶಿವಾನಂದ ಅಬ್ದುಲ್‌ಪುರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ