ಇದ್ದಲಗಿ ಅಗ್ನಿ ಅವಘಡ: ಸಂತ್ರಸ್ತರಿಗೆ ಸಚಿವ ಕಾಶಪ್ಪನವರ ಸಾಂತ್ವನ
ಶೀಘ್ರ ಗ್ರಾಮ ಸ್ಥಳಾಂತರಕ್ಕೆ ಕ್ರಮ, 4 ಗುಂಟೆ ಜಾಗದ ಬೇಡಿಕೆ ಈಡೇರಿಸಲು ಭರವಸೆ
ಬಾಗಲಕೋಟೆ: ಹುನಗುಂದ ತಾಲೂಕಿನ ಇದ್ದಲಗಿ ಗ್ರಾಮದಲ್ಲಿ ಸಂಭವಿಸಿದ ಆಕಸ್ಮಿಕ ಅಗ್ನಿ ಅವಘಡದ ಸ್ಥಳಕ್ಕೆ ಸಣ್ಣ ಕೈಗಾರಿಕೆ ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ ಮಂಗಳವಾರ ಭೇಟಿ ನೀಡಿ, ಹಾನಿಗೊಳಗಾದ ಪ್ರದೇಶವನ್ನು ಪರಿಶೀಲಿಸಿದರು.
ಭಾನುವಾರ ರಾತ್ರಿ ಶೆಡ್‌ಗಳಿಗೆ ಬೆಂಕಿ ಹೊತ್ತಿಕೊಂಡಿರುವ ಮಾಹಿತಿ ದೊರೆತ ತಕ್ಷಣ ಅಧಿಕಾರಿಗಳಿಗೆ ಸೂಚನೆ ನೀಡಿ ಅಗ್ನಿ ನಂದಿಸುವ ಕಾರ್ಯಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿತ್ತು ಎಂದು ಸಚಿವರು ತಿಳಿಸಿದರು.
ಮುಳುಗಡೆ ಪ್ರದೇಶವಾಗಿರುವ ಇದ್ದಲಗಿ ಗ್ರಾಮವನ್ನು ಸಂಪೂರ್ಣವಾಗಿ ಸ್ಥಳಾಂತರಿಸುವ ಅಗತ್ಯವಿದ್ದು, ಪುನರ್ವಸತಿ ಕೇಂದ್ರದಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಿ ಶೀಘ್ರದಲ್ಲೇ ಸ್ಥಳಾಂತರ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಅವರು ಭರವಸೆ ನೀಡಿದರು.ಇದೇ ವೇಳೆ, ಸ್ಥಳಾಂತರ ಸಂದರ್ಭದಲ್ಲಿ ಪ್ರತಿ ಕುಟುಂಬಕ್ಕೆ ನೀಡಲಾಗುತ್ತಿರುವ ಒಂದು ಗುಂಟೆ ಜಾಗದ ಬದಲಿಗೆ ನಾಲ್ಕು ಗುಂಟೆ ಜಾಗ ನೀಡಬೇಕು ಎಂಬುದು ಸಂತ್ರಸ್ತರ ಪ್ರಮುಖ ಬೇಡಿಕೆಯಾಗಿದೆ. ಈ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತಂದು, ಅಗತ್ಯ ಆದೇಶ ತಿದ್ದುಪಡಿ ಮೂಲಕ ನಾಲ್ಕು ಗುಂಟೆ ಜಾಗ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಸಚಿವರು ಹೇಳಿದರು.
ಸೆಪ್ಟೆಂಬರ್ 4ರಂದು ಮುಖ್ಯಮಂತ್ರಿ ಜಿಲ್ಲೆಗೆ ಆಗಮಿಸಲಿದ್ದು, ಈ ಸಂದರ್ಭದಲ್ಲಿ ಇದ್ದಲಗಿ ಸಂತ್ರಸ್ತರ ಸಮಸ್ಯೆ ಹಾಗೂ ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ನೇರವಾಗಿ ತಂದು ಪರಿಹಾರ ಕಂಡುಕೊಳ್ಳಲು ಕ್ರಮವಹಿಸಲಾಗುವುದು ಎಂದರು.
ಅಗ್ನಿ ಅವಘಡ ಸಂಭವಿಸಿದ ಸಂದರ್ಭದಲ್ಲಿ ಗ್ರಾಮಸ್ಥರು ಶ್ರಾವಣ ಮಾಸದ ಪ್ರವಚನ ಕಾರ್ಯಕ್ರಮಕ್ಕೆ ತೆರಳಿದ್ದರಿಂದ ಯಾವುದೇ ಜೀವಹಾನಿ ಸಂಭವಿಸಿಲ್ಲ. ಆದರೆ ಹಲವು ವರ್ಷಗಳಿಂದ ತಾತ್ಕಾಲಿಕ ಶೆಡ್‌ಗಳಲ್ಲಿ ವಾಸಿಸುತ್ತಿದ್ದ ಕುಟುಂಬಗಳ ದವಸ-ಧಾನ್ಯ, ಬಟ್ಟೆ-ಬರೆ ಹಾಗೂ ಅಗತ್ಯ ದಾಖಲೆಗಳು ಬೆಂಕಿಗೆ ಆಹುತಿಯಾಗಿವೆ.ಅಧಿಕಾರಿಗಳಿಂದ ಸಂಪೂರ್ಣ ಹಾನಿ ಪರಿಶೀಲನೆ ನಡೆಸಿದ ನಂತರ ಸರ್ಕಾರದ ನಿಯಮಾನುಸಾರ ಸೂಕ್ತ ಪರಿಹಾರ ನೀಡಲಾಗುವುದು ಎಂದು ಸಚಿವರು ತಿಳಿಸಿದರು.
ಸ್ಥಳಾಂತರ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಸಂತ್ರಸ್ತ ಕುಟುಂಬಗಳಿಗೆ ಅದೇ ಸ್ಥಳದಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಿಕೊಡಲು ತುರ್ತು ಕ್ರಮ ಕೈಗೊಳ್ಳಲಾಗುವುದು. ಇದೇ ವೇಳೆ ಬಾಧಿತ ಕುಟುಂಬಗಳಿಗೆ ಆಹಾರಧಾನ್ಯಗಳ ಕಿಟ್‌ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಂಗಪ್ಪ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಜಾನನ ಬಾಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ಪುನರ್ವಸತಿ, ಪುನರ್ ನಿರ್ಮಾಣ ಹಾಗೂ ಭೂಸ್ವಾಧೀನ ಸಮಾಲೋಚಕ ಮಹಾದೇವ ಮುರಗಿ, ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮುರಳೀಧರ ದೇಶಪಾಂಡೆ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ