ಸುತಗುಂಡಾರದಲ್ಲಿ ಕಿತ್ತೂರು ರಾಣಿ ಚೆನ್ನಮ್ಮನ ಭವ್ಯ ಮೂರ್ತಿ ಅನಾವರಣ
ಸುತಗುಂಡಾರದಲ್ಲಿ ಕಿತ್ತೂರು ರಾಣಿ ಚೆನ್ನಮ್ಮನ ಭವ್ಯ ಮೂರ್ತಿ ಅನಾವರಣ
ಚೆನ್ನಮ್ಮನ ಇತಿಹಾಸ ಮುಂದಿನ ಪೀಳಿಗೆಗೆ ತಿಳಿಸಬೇಕು
ಬಾಗಲಕೋಟೆ : ಸುತಗುಂಡಾರ ಗ್ರಾಮದಲ್ಲಿ ಶುಕ್ರವಾರ (ಸೆ.25) ಕಿತ್ತೂರು ರಾಣಿ ಚೆನ್ನಮ್ಮ ಅವರು ಅಶ್ವಾರೂಢರಾಗಿರುವ ಭವ್ಯ ಮೂರ್ತಿಯನ್ನು ಅನಾವರಣಗೊಳಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಉಮೇಶ್ ಮೇಟಿ ವಹಿಸಿದ್ದರು. ವಿಧಾನಪರಿಷತ್ ಸದಸ್ಯ ಹನುಮಂತ ನಿರಾಣಿ ಹಾಗೂ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರು ನುಗ್ಲಿ ಸೇರಿದಂತೆ ಗ್ರಾಮದ ಹಿರಿಯರು, ಮುಖಂಡರು ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಶಾಸಕ ಉಮೇಶ್ ಮೇಟಿ ಮಾತನಾಡಿ, ಗ್ರಾಮಸ್ಥರು ಹಾಗೂ ಹಿರಿಯರ ಬಹುದಿನಗಳ ಪ್ರಯತ್ನದ ಫಲವಾಗಿ ಕಿತ್ತೂರು ರಾಣಿ ಚೆನ್ನಮ್ಮನ ಭವ್ಯ ಮೂರ್ತಿ ಸ್ಥಾಪನೆಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಗ್ರಾಮಸ್ಥರ ಒಗ್ಗಟ್ಟು, ಅಭಿಮಾನ ಹಾಗೂ ಚೆನ್ನಮ್ಮನವರ ಮೇಲಿನ ಗೌರವದಿಂದ ಇಂತಹ ಐತಿಹಾಸಿಕ ಕಾರ್ಯ ಸಾಕಾರಗೊಂಡಿದೆ. ಚೆನ್ನಮ್ಮನವರ ಇತಿಹಾಸ ಮತ್ತು ದೇಶಪ್ರೇಮವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವಾಗಬೇಕು ಎಂದರು.
ಬ್ರಿಟಿಷರ ಆಳ್ವಿಕೆಯ ಸಂದರ್ಭದಲ್ಲಿ ಧೈರ್ಯದಿಂದ ಹೋರಾಡಿದ ಕಿತ್ತೂರು ರಾಣಿ ಚೆನ್ನಮ್ಮನವರ ಸಾಹಸ, ತ್ಯಾಗ ಹಾಗೂ ಸ್ವಾಭಿಮಾನ ಇಂದಿನ ಯುವಜನತೆಗೆ ಸ್ಫೂರ್ತಿಯಾಗಬೇಕು. ಸಂಗೊಳ್ಳಿ ರಾಯಣ್ಣ ಅವರ ತ್ಯಾಗ ಮತ್ತು ನಿಷ್ಠೆಯನ್ನೂ ಮಕ್ಕಳು ಹಾಗೂ ಯುವಕರು ತಿಳಿದುಕೊಳ್ಳಬೇಕು. ಸುತಗುಂಡಾರದಲ್ಲಿ ಸ್ಥಾಪಿಸಿರುವ ಮೂರ್ತಿ ನಮ್ಮ ಇತಿಹಾಸ ಮತ್ತು ವೀರ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಸಂಕೇತವಾಗಲಿ ಎಂದು ಉಮೇಶ್ ಮೇಟಿ ಹೇಳಿದರು.
ವಿಧಾನಪರಿಷತ್ ಸದಸ್ಯ ಹನುಮಂತ ನಿರಾಣಿ ಮಾತನಾಡಿ, ಕಿತ್ತೂರು ರಾಣಿ ಚೆನ್ನಮ್ಮ ಅವರು ಬ್ರಿಟಿಷರ ವಿರುದ್ಧ ಧೈರ್ಯದಿಂದ ಹೋರಾಡಿದ ವೀರ ಮಹಿಳೆ. ಅವರ ದೇಶಪ್ರೇಮ, ತ್ಯಾಗ ಹಾಗೂ ಸ್ವಾಭಿಮಾನದ ಹೋರಾಟವನ್ನು ಪ್ರತಿಯೊಬ್ಬರೂ ಸ್ಮರಿಸಬೇಕು. ಸುತಗುಂಡಾರ ಗ್ರಾಮದಲ್ಲಿ ಗ್ರಾಮಸ್ಥರ ಒಗ್ಗಟ್ಟಿನಿಂದ ಇಂತಹ ಭವ್ಯ ಮೂರ್ತಿ ಸ್ಥಾಪನೆಯಾಗಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.
ಚೆನ್ನಮ್ಮನವರ ಇತಿಹಾಸ ಕೇವಲ ಪುಸ್ತಕಗಳಿಗೆ ಸೀಮಿತವಾಗಬಾರದು. ಮಕ್ಕಳಿಗೆ ಹಾಗೂ ಯುವಕರಿಗೆ ಅವರ ಹೋರಾಟದ ಕುರಿತು ತಿಳಿಸುವ ಮೂಲಕ ದೇಶಾಭಿಮಾನ ಬೆಳೆಸಬೇಕು. ಸಂಗೊಳ್ಳಿ ರಾಯಣ್ಣ ಸೇರಿದಂತೆ ದೇಶಕ್ಕಾಗಿ ತ್ಯಾಗ ಮಾಡಿದ ಮಹನೀಯರ ಜೀವನ ಚರಿತ್ರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹನುಮಂತ ನಿರಾಣಿ ಹೇಳಿದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರು ನುಗ್ಲಿ ಮಾತನಾಡಿ, ಕಿತ್ತೂರು ರಾಣಿ ಚೆನ್ನಮ್ಮ ಅವರು ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಸ್ವಾಭಿಮಾನದಿಂದ ಹೋರಾಡಿದ ವೀರ ಮಹಿಳೆ. ಅವರು ಯಾಕಾಗಿ ಹೋರಾಟ ಮಾಡಿದರು ಎಂಬುದನ್ನು ಇಂದಿನ ಮಕ್ಕಳು ಮತ್ತು ಯುವಕರು ಅರ್ಥಮಾಡಿಕೊಳ್ಳಬೇಕು. ಅವರ ದೇಶಪ್ರೇಮ ಮತ್ತು ತ್ಯಾಗ ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಬೇಕು ಎಂದರು.
ಸುತಗುಂಡಾರದಲ್ಲಿ ಸ್ಥಾಪಿಸಿರುವ ಚೆನ್ನಮ್ಮನ ಮೂರ್ತಿ ಕೇವಲ ಪ್ರತಿಮೆಯಾಗದೆ, ಮುಂದಿನ ಪೀಳಿಗೆಗೆ ದೇಶಾಭಿಮಾನದ ಪಾಠ ಹೇಳುವ ಸಂಕೇತವಾಗಬೇಕು. ತಾಯಂದಿರು ತಮ್ಮ ಮಕ್ಕಳನ್ನು ಚೆನ್ನಮ್ಮನ ಮೂರ್ತಿಯ ಬಳಿಗೆ ಕರೆದುಕೊಂಡು ಹೋಗಿ, ಅವರ ಇತಿಹಾಸವನ್ನು ತಿಳಿಸಬೇಕು. ಚೆನ್ನಮ್ಮ ದೇಶಕ್ಕಾಗಿ ಹೋರಾಡಿದಂತೆ, ಮಕ್ಕಳು ಮುಂದೆ ಬೆಳೆದು ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂಬ ಸಂದೇಶವನ್ನು ಮಕ್ಕಳಿಗೆ ನೀಡಬೇಕು ಎಂದು ಹೇಳಿದರು.
ಇಂದಿನ ಮಕ್ಕಳು ಹೆಚ್ಚಿನ ಸಮಯವನ್ನು ಮೊಬೈಲ್‌ನಲ್ಲಿ ಕಳೆಯುತ್ತಿರುವ ಸಂದರ್ಭದಲ್ಲಿ, ಪೋಷಕರು ದೇಶಕ್ಕಾಗಿ ಹೋರಾಡಿದ ವೀರರು ಹಾಗೂ ಮಹನೀಯರ ಜೀವನ ಚರಿತ್ರೆಯನ್ನು ಮಕ್ಕಳಿಗೆ ತಿಳಿಸುವ ಕೆಲಸ ಮಾಡಬೇಕು. ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಅವರ ಇತಿಹಾಸ ಮುಂದಿನ ಪೀಳಿಗೆಯ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯಬೇಕು ಎಂದು ಚಂದ್ರು ನುಗಲಿ ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀ ಷ.ಬ್ರ. ಸಿದ್ದಲಿಂಗ ಶಿವಯೋಗಿ ಶಿವಾಚಾರ್ಯರು, ಬಿಲ್ವಾಶ್ರಮ ಹಿರೇಮಠ, ಬಿಲ್ ಕೆರೂರ; ಬಸವಂತಪ್ಪ ಮೇಟಿ, ಸಂಗಮೇಶ ದೊಡ್ಡಮನಿ, ಅಡಿವೆಪ್ಪ ಸರೂರ, ಶಿವಾನಂದ ಅಫ್ಜಲ್ಪುರ, ನಿಂಗಣ್ಣ ಕೋಟಿ, ಎಸ್.ಎನ್. ರಾಂಪುರ, ಬಲರಾಮ ಪಾವರ್, ಬಸವರಾಜ ನರಗುಂದ, ಕುಮಾರ್ ಬಿಂಜವಾಡಗಿ, ಮಲ್ಲಪ್ಪ ಮಳಗಾವಿ, ಸಿದ್ದಮ್ಮ ಮೇಟಿ, ಹನುಮಂತ ಪೂಜಾರಿ ಸೇರಿದಂತೆ ಗ್ರಾಮದ ಹಿರಿಯರು, ಮುಖಂಡರು, ಯುವಕರು, ಮಹಿಳೆಯರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಸುರೇಶ ತಿಮಸಾಗರ ಅವರು ಅಚ್ಚುಕಟ್ಟಾಗಿ ನಿರ್ವಹಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ