ಕಳಪೆ ಕಾಮಗಾರಿಗೆ ಅವಕಾಶವಿಲ್ಲ; ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಬೇಡಿ: ಉಮೇಶ್ ಮೇಟಿ
ಬಾಗಲಕೋಟೆ: 2025-26ನೇ ಸಾಲಿನ ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಬಾಗಲಕೋಟೆ ಮತಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ₹2.75 ಕೋಟಿ ಮೊತ್ತದ ಸಾರ್ವಜನಿಕ ಸಮುದಾಯ ಭವನಗಳ ನಿರ್ಮಾಣ ಹಾಗೂ ರಸ್ತೆ ಡಾಂಬರೀಕರಣ ಕಾಮಗಾರಿಗಳಿಗೆ, 15ನೇ ಹಣಕಾಸು ಯೋಜನೆಯಡಿ ಮುಗಳೊಳ್ಳಿ ಗ್ರಾಮದಲ್ಲಿ ಆಯುಷ್ಮಾನ್ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಉಮೇಶ್ ಮೇಟಿ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಉಮೇಶ್ ಮೇಟಿ, ಬಾಗಲಕೋಟೆ ಮತಕ್ಷೇತ್ರದ ಗ್ರಾಮಗಳಲ್ಲಿ ಸಾರ್ವಜನಿಕರ ಅಗತ್ಯಕ್ಕೆ ಅನುಗುಣವಾಗಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಸಮುದಾಯ ಭವನಗಳು, ರಸ್ತೆ ಹಾಗೂ ಆರೋಗ್ಯ ಕೇಂದ್ರಗಳಂತಹ ಮೂಲಸೌಕರ್ಯಗಳಿಂದ ಗ್ರಾಮಸ್ಥರಿಗೆ ಅನುಕೂಲವಾಗಲಿದೆ. ಗ್ರಾಮಗಳ ಅಭಿವೃದ್ಧಿಗೆ ಹಂತ ಹಂತವಾಗಿ ಅಗತ್ಯ ಅನುದಾನ ಒದಗಿಸಲಾಗುವುದು ಎಂದರು.
ಅಧಿಕಾರಿಗಳು ಪ್ರತಿಯೊಂದು ಕಾಮಗಾರಿಯ ಮೇಲೂ ನಿಗಾ ವಹಿಸಬೇಕು. ಗುತ್ತಿಗೆದಾರರು ಸರ್ಕಾರ ನಿಗದಿಪಡಿಸಿರುವ ಗುಣಮಟ್ಟ ಹಾಗೂ ಮಾನದಂಡದಂತೆ ಕಾಮಗಾರಿ ನಿರ್ವಹಿಸಬೇಕು. ಯಾವುದೇ ಕಾರಣಕ್ಕೂ ಕಳಪೆ ಕಾಮಗಾರಿ ನಡೆಯಬಾರದು. ಕಾಮಗಾರಿಯಲ್ಲಿ ಬಳಸುವ ಸಾಮಗ್ರಿಗಳ ಗುಣಮಟ್ಟವನ್ನು ಅಧಿಕಾರಿಗಳು ಪರಿಶೀಲಿಸಬೇಕು. ಸಾರ್ವಜನಿಕರ ಹಣದಲ್ಲಿ ಕೈಗೊಳ್ಳುವ ಕಾಮಗಾರಿಗಳು ದೀರ್ಘಕಾಲ ಬಾಳಿಕೆ ಬರುವಂತಿರಬೇಕು. ಕಾಮಗಾರಿಗಳ ಗುಣಮಟ್ಟದಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳಬಾರದು ಎಂದು ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು.
ಈ ಕಾರ್ಯಕ್ರಮದಲ್ಲಿ ಬಸವಂತಪ್ಪ ಮೇಟಿ, ಶಿವಾನಂದ ಅಫ್ಜಲ್ಪುರ್, ಮುದುಕಣ್ಣ ಕೊಣ್ಣೂರ, ಎಂ.ಆರ್. ಅಂಗಡಿ, ನಿಂಗಣ್ಣ ಕೋಟಿ, ದ್ಯಾಮಣ್ಣ ಗಾಳಿ, ಅಕ್ಬರ್ ಮುಲ್ಲಾ, ಲಕ್ಷ್ಮಣ ದಡ್ಡಿ, ಮುತ್ತಣ್ಣ ಪಟ್ಟಣದ, ನಾಗರಾಜ್ ಹದ್ಲಿ, ಹನುಮಂತ ಬಳೆಗಾರ, ರಮೇಶ್ ಕೊಳ್ಳಾರ, ಶ್ರೀಕರ್ ದೇಸಾಯಿ, ರಾಯಪ್ಪ ವಾಲಿಕಾರ, ಚನ್ನವೀರ ಅಂಗಡಿ, ಅಜಿಸಾಬ್ ದಂಡಿನ್, ನಾರಾಯಣ ಶಿಲ್ಪಿ, ರಾಮು ಪೂಜಾರಿ ಹಾಗೂ ಲೋಕೇಶ್ ಲಮಾಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ