ಕಲಾವಿದರ ಬೇಡಿಕೆಗಳಿಗೆ ಶೀಘ್ರ ಪರಿಹಾರದ ಭರವಸೆ : ಶಾಸಕ ಉಮೇಶ ಮೇಟಿ
ಬಾಗಲಕೋಟೆ: ಕಲಾವಿದರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಕುಮಾರ ಶೆಟ್ಟಿ ಬಣ) ಬಾಗಲಕೋಟೆ ಜಿಲ್ಲಾ ಘಟಕದ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಂಡಿದ್ದ ಮೂರು ದಿನಗಳ ಉಪವಾಸ ಸತ್ಯಾಗ್ರಹಕ್ಕೆ ಬಾಗಲಕೋಟೆ ಶಾಸಕ ಉಮೇಶ ಮೇಟಿ ಅವರು ಸ್ಪಂದಿಸಿ, ಕಲಾವಿದರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಕಲಾವಿದರಿಗೆ ನೀಡಲಾಗುತ್ತಿರುವ ಪ್ರಾಯೋಜನ ಮೊತ್ತವನ್ನು ಹೆಚ್ಚಿಸಬೇಕು ಹಾಗೂ ಸಹಾಯಕ ನಿರ್ದೇಶಕರ ಹುದ್ದೆಗೆ ಖಾಯಂ ಅಧಿಕಾರಿಯನ್ನು ನೇಮಕ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕರ್ನಾಟಕ ರಾಜ್ಯ ಸರ್ವ ಕಲಾವಿದರ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ಜೈ ಕರ್ನಾಟಕ ಸಂಘಟನೆ, ರೈತ ಸಂಘಟನೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಸದಸ್ಯರು ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.
ಸತ್ಯಾಗ್ರಹ ಸ್ಥಳಕ್ಕೆ ಶಾಸಕ ಉಮೇಶ ಮೇಟಿ ಅವರು ಭೇಟಿ ನೀಡಿ ಪ್ರತಿಭಟನಾಕಾರರೊಂದಿಗೆ ನೇರವಾಗಿ ಮಾತುಕತೆ ನಡೆಸಿದರು. ಕಲಾವಿದರ ಸಮಸ್ಯೆಗಳನ್ನು ಆಲಿಸಿದ ಶಾಸಕರು, ಅವರ ಬೇಡಿಕೆಗಳ ಕುರಿತು ಸರ್ಕಾರದ ಗಮನಕ್ಕೆ ತಂದು ಸೂಕ್ತ ಪರಿಹಾರಕ್ಕಾಗಿ ಶಿಫಾರಸು ಮಾಡುವುದಾಗಿ ತಿಳಿಸಿದರು.
ವಿಶೇಷವಾಗಿ ಕಲಾವಿದರಿಗೆ ನೀಡುವ ಪ್ರಾಯೋಜನ ಮೊತ್ತ ಹೆಚ್ಚಳ ಹಾಗೂ ಅಗತ್ಯ ಅಧಿಕಾರಿಯನ್ನು ನೇಮಕ ಮಾಡುವ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ, ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಭರವಸೆಯನ್ನು ಶಾಸಕ ಉಮೇಶ ಮೇಟಿ ನೀಡಿದರು. ಕಲಾವಿದರ ಸಮಸ್ಯೆಗಳನ್ನು ನಿರ್ಲಕ್ಷಿಸದೆ, ಅವರ ಬೇಡಿಕೆಗಳಿಗೆ ಸ್ಪಂದಿಸುವುದು ಅಗತ್ಯವಾಗಿದೆ ಎಂದು ಅವರು ಹೇಳಿದರು.
ನಂತರ ಜಿಲ್ಲಾಧಿಕಾರಿ ಸಂಗಪ್ಪ ಅವರು ಕೂಡ ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರೊಂದಿಗೆ ಚರ್ಚಿಸಿದರು. ಶಾಸಕ ಉಮೇಶ ಮೇಟಿ ಅವರೊಂದಿಗೆ ಸಮಾಲೋಚನೆ ನಡೆಸಿ ಕಲಾವಿದರ ಬೇಡಿಕೆಗಳ ಕುರಿತು ಸರ್ಕಾರದ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಶಾಸಕರಾದ ಉಮೇಶ ಮೇಟಿ ಹಾಗೂ ಜಿಲ್ಲಾಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿರುವ ಹಿನ್ನೆಲೆಯಲ್ಲಿ ಉಪವಾಸ ಸತ್ಯಾಗ್ರಹವನ್ನು ಹಿಂಪಡೆಯುವುದಾಗಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಕುಮಾರ ಶೆಟ್ಟಿ ಬಣ) ಜಿಲ್ಲಾ ಅಧ್ಯಕ್ಷ ಮುತ್ತುರಾಜ ಅರಗಿನಶೆಟ್ಟಿ ಘೋಷಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ವ ಕಲಾವಿದರ ಸಂಘದ ಅಧ್ಯಕ್ಷ ಶರಣಬಸವ ಶಾಸ್ತ್ರಿಗಳು, ಶಶಿಕಾಂತ ನಾಯಕ, ಶಂಕ್ರಪ್ಪ ತಂಬಾಕದ, ಸದಾಶಿವ ಅಂಬೋಜಿ, ಈಶ್ವರಪ್ಪ ಹೊರಟ್ಟಿ, ನಾಗರಾಜ್ ಹದ್ಲಿ, ದ್ಯಾಮಣ್ಣ ಗಾಳಿ, ಅಕ್ಬರ್ ಮುಲ್ಲಾ ಸೇರಿದಂತೆ ನೂರಾರು ಕಲಾವಿದರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ