ನಗುತ್ತಲೇ ಹೃದಯ ಗೆದ್ದ ನವಾಬ್ — ಇಂದು ನೆನಪು ಮಾತ್ರ

ನಮ್ಮ ಜೀವನದಲ್ಲಿ ಕೆಲವರು ಕೇವಲ ಸ್ನೇಹಿತರಲ್ಲ… ಅವರು ನಮ್ಮ ದಿನಗಳ ಬೆಳಕು, ನಮ್ಮ ನಗುವಿನ ಕಾರಣ, ನಮ್ಮ ನೆನಪಿನ ನಿತ್ಯ ಅಸ್ತಿತ್ವವಾಗಿರುತ್ತಾರೆ. ಅಂಥವರಲ್ಲಿ ಒಬ್ಬನೇ ನಮ್ಮ ಪ್ರೀತಿಯ ಗೆಳೆಯ ನವಾಬ್.
2020ರಿಂದ ಇಲ್ಲಿಯವರೆಗೆ ನಮ್ಮ ಜೊತೆ ಇದ್ದ ನವಾಬ್, ಕೇವಲ ಸ್ನೇಹಿತನಲ್ಲ — ನಮ್ಮ ಬದುಕಿನ ಒಂದು ಭಾಗವಾಗಿದ್ದನು. ಎಲ್ಲರ ಜೊತೆ ನಗುನಗುತ, ಸದಾ ಹಾಸ್ಯ ಮಾಡುತ್ತ, ಎಲ್ಲರ ಮನ ಗೆದ್ದ ಆ ನಗುಮುಖದ ಗೆಳೆಯ ಇವತ್ತು ನಮ್ಮೊಂದಿಗೆ ಇಲ್ಲ ಎಂಬ ವಿಚಾರವೇ ನಂಬಲಾರದ ನೋವನ್ನು ಉಂಟುಮಾಡುತ್ತದೆ.
ನಿನ್ನೆ ಅವನ ಸಾವಿನ ಸುದ್ದಿ ಕೇಳಿದ ಕ್ಷಣದಿಂದಲೇ ನಮ್ಮ ಹೃದಯದಲ್ಲಿ ಒಂದು ಖಾಲಿತನ ಮೂಡಿದೆ. ನಮ್ಮ 20 ಜನ ಸ್ನೇಹಿತರ ಬಳಗದಲ್ಲಿ ನವಾಬ್ ಇಲ್ಲ ಅನ್ನೋದನ್ನು ಒಪ್ಪಿಕೊಳ್ಳೋದು ತುಂಬಾ ಕಷ್ಟವಾಗಿದೆ. “ನವಾಬ್ ಇಲ್ಲ” ಅನ್ನೋ ಮಾತು ನಮ್ಮ ಮನಸ್ಸಿಗೆ ಇಳಿಯುತ್ತಿಲ್ಲ.
ನಿನ್ನೆ ಎಲ್ಲಾ ಸ್ನೇಹಿತರು ಬೇರೆ ಬೇರೆ ರಾಜ್ಯಗಳಲ್ಲಿ ಇದ್ದ ನಮ್ಮ ಆತ್ಮೀಯ ಗೆಳೆಯರು, ಗೆಳತಿಯರು ಎಲ್ಲರೂ ವಿಡಿಯೋ ಕಾಲ್ ಮಾಡಿ “ಅವನ ಮುಖ ಒಮ್ಮೆ ತೋರಿಸಿ” ಎಂದು ಕೇಳಿಕೊಂಡರು. ಆದರೆ ನಾವು ಅಲ್ಲಿಗೆ ತಲುಪುವಷ್ಟರಲ್ಲಿ ನಮ್ಮ ಗೆಳೆಯನ ಅಂತಿಮ ವಿಧಿವಿಧಾನಗಳು ಮುಗಿದಿದ್ದವು. ನಮಗೂ ಅವನ ಮುಖವನ್ನು ಕೊನೆಯ ಬಾರಿ ನೋಡುವ ಭಾಗ್ಯ ಸಿಗಲಿಲ್ಲ. ಆ ಕ್ಷಣ ನಮ್ಮ ಮನಸ್ಸಿಗೆ ಇನ್ನಷ್ಟು ನೋವು ತಂದಿತು. ನಮ್ಮ ಎಲ್ಲಾ ಸ್ನೇಹಿತರೂ ಕೂಡ ಆ ದುಃಖವನ್ನು ತಡೆದುಕೊಳ್ಳಲಾಗದೆ ಕಣ್ಣೀರಿನಲ್ಲಿ ಮುಳುಗಿದರು.
ಅವನು ಯಾವಾಗಲೂ ಎಲ್ಲರನ್ನೂ ಒಟ್ಟಿಗೆ ಸೇರಿಸಲು ಪ್ರಯತ್ನಿಸುತ್ತಿದ್ದ. “ಏನಾದರೂ ಫ್ಯಾಮಿಲಿ ಜೊತೆ ಟ್ರಿಪ್ ಹೋಗೋಣ” ಅಂತ ಪದೇ ಪದೇ ಕರೆ ಮಾಡುತ್ತಿದ್ದ. ಮೇ ತಿಂಗಳಲ್ಲಿ ಮತ್ತೆ ಶಾಲಾ ಗೆಳೆಯರ ಜೊತೆ ಟೂರ್ ಹೋಗೋಣ ಅಂತ ಎಷ್ಟೋ ಸಲ ಹೇಳಿದ್ದ. ಆ ಕನಸುಗಳು ಈಗ ನೆನಪಾಗಿ ಉಳಿದಿವೆ.

ಸೆಲ್ಫಿ ತೆಗೆದುಕೊಳ್ಳದೆ ಇದ್ದರೂ, ನಮ್ಮ ನೆನಪುಗಳಲ್ಲಿ ಅವನ ನಗುಮುಖವೇ ದೊಡ್ಡ ಚಿತ್ರವಾಗಿದೆ. ಅವನು ಇದ್ದಾಗ ಎಲ್ಲರೂ ಖುಷಿಯಾಗಿದ್ದೆವು. ಅವನು ಇಲ್ಲದಿದ್ದರೂ, ಅವನ ನೆನಪುಗಳು ನಮ್ಮ ಜೊತೆ ಇರುತ್ತವೆ.

ನವಾಬ್ ನಮ್ಮನ್ನು ಬಿಟ್ಟು ಹೋಗಿಲ್ಲ…
ಅವನು ನಮ್ಮ ನಗುವಿನಲ್ಲಿ, ನಮ್ಮ ಮಾತುಗಳಲ್ಲಿ, ನಮ್ಮ ನೆನಪುಗಳಲ್ಲಿ ಇಂದಿಗೂ ಬದುಕಿದ್ದಾನೆ.

ನೀನು ಇಲ್ಲದಿದ್ದರೂ, ನಮ್ಮ ಮನಸ್ಸಿನಲ್ಲಿ ನೀನು ಸದಾ ಬದುಕುತ್ತೀಯ.
ನಿನ್ನ ಸ್ನೇಹವನ್ನು ನಾವು ಎಂದಿಗೂ ಮರೆಯುವುದಿಲ್ಲ.

🕊️ ಶಾಂತಿ ನಿನಗೆ… ನಮ್ಮ ಹೃದಯದಲ್ಲಿ ಸದಾ ಜೀವಂತ

ಕುಟುಂಬಕ್ಕೆ ಶಾಂತಿ ಮತ್ತು ಧೈರ್ಯ ಸಿಗಲಿ. ಅವರ ಒಂದು ಗಂಡು ಹಾಗೂ ಒಂದು ಹೆಣ್ಣು ಮಗು ಜೀವನದಲ್ಲಿ ಯಶಸ್ವಿಯಾಗಲಿ ಎಂಬುದು ನಮ್ಮ ಪ್ರಾರ್ಥನೆ.



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬಾಗಲಕೋಟೆ ಕುರುಬರ ಸಂಘದ ಜಿಲ್ಲಾ ಅಧ್ಯಕ್ಷ ಸ್ಥಾನದಿಂದ ಡಿ.ಬಿ. ಸಿದ್ದಾಪುರರನ್ನು ವಿಮುಕ್ತಿಗೊಳಿಸಿ ಆದೇಶ

ಬಾಗಲಕೋಟೆಯಲ್ಲಿ ವಿಜಯೇಂದ್ರ ಸಮ್ಮುಖದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬಿಜೆಪಿ ಸೇರ್ಪಡೆ

ಬಾಗಲಕೋಟೆ ಉಪಚುನಾವಣೆ: ಸಿಎಂ ಸಿದ್ದರಾಮಯ್ಯ ಭೇಟಿ – ಮಲ್ಲಿಕಾರ್ಜುನ ಚರಂತಿಮಠ ಮನೆಗೆ ಆಗಮನ ರಾಜಕೀಯ ಚರ್ಚೆಗೆ ಕಾರಣ